ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಕಮಲಶಿಲೆ ಗ್ರಾಮದ ಮಾನಂಜೆಯಲ್ಲಿ ಪ್ರಧಾನ ಕಛೇರಿ ಹೊಂದಿರುವ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ ನಿ., ಕಮಲಶಿಲೆ ಇದರ ಅಮೃತ ಮಹೋತ್ಸವ ಅಮೃತಯಾನ 1950-2025 ಇದೇ ಜನವರಿ 31 ಶನಿವಾರ ಪೂರ್ವಾಹ್ನ 10 ಗಂಟೆಗೆ ನಡೆಯಲಿದೆ ಎಂದು ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಪ್ರದೀಪ ಯಡಿಯಾಳ ಹೇಳಿದರು.
ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸಹಕಾರಿ ರತ್ನ ಎಂ. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಪ್ರಧಾನ ಕಛೇರಿ ಲಿಫ್ಟ್ ವ್ಯವಸ್ಥೆಯನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಸಂಘದ ಪ್ರಧಾನ ಕಛೇರಿ ಮುಂಭಾಗದಲ್ಲಿ ನಿರ್ಮಾಣ ಮಾಡಲಾದ ಬಸ್ ಪ್ರಯಾಣಿಕರ ತಂಗುದಾಣವನ್ನು ಶಾಸಕ ಗುರುರಾಜ ಗಂಟಿಹೊಳೆ ಉದ್ಘಾಟಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದಾರೆ. ಹಳ್ಳಿಹೊಳೆ ಶಾಖೆಯಲ್ಲಿ ಮಾಸ್ ಅಡಿಕೆ ಖರೀದಿ ಗೋದಾಮನ್ನು ಮಾಸ್ ಲಿ ಮಂಗಳೂರು ಇದರ ಅಧ್ಯಕ್ಷರಾದ ಸೀತಾರಾಮ ರೈ ಸವಣೂರು ಉದ್ಘಾಟಿಸಲಿದ್ದಾರೆ. ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಎಸ್.ಸಚ್ಚಿದಾನಂದ ಚಾತ್ರ ಶುಭಾಶಂಸನೆ ನೀಡಲಿದ್ದಾರೆ ಎಂದರು.
ಮಧ್ಯಾಹ್ನ 3 ಗಂಟೆಯಿಂದ ಬಡಗುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ‘ಗದಾಯುದ್ಧ-ಕನಕಾಂಗಿ ಕಲ್ಯಾಣ’ ಪ್ರದರ್ಶನಗೊಳ್ಳಲಿದೆ. ಸಂಜೆ 6.30ರಿಂದ ಗಂಗಾವತಿ ಪ್ರಾಣೇಶ ಮತ್ತು ತಂಡದವರಿಂದ ನಗೆಹಬ್ಬ, ರಾತ್ರಿ 8ರಿಂದ ಸಂಘದ ಮಾಜಿ ಪದಾಧಿಕಾರಿಗಳು, ನಿವೃತ್ತ ಅಧಿಕಾರಿಗಳು ಮತ್ತು ನಿವೃತ್ತ ಸಿಬ್ಬಂದಿಯರಿಗೆ ಸನ್ಮಾನ ಕಾರ್ಯಕ್ರಮ, ಬಳಿಕ ರಾಜ್ಯ ಮಟ್ಟದ ನಿರೂಪಕ ಸಂದೇಶ ಶೆಟ್ಟಿ ಸಳ್ವಾಡಿ ಸಾರಥ್ಯದಲ್ಲಿ ಅಜಯ್ ವಾರಿಯರ್ ಮತ್ತು ತಂಡದವರಿಂದ ಸಂಗೀತ ಗಾನಾಮೃತ ‘ಲಯ-ಲಹರಿ’ ನಡೆಯಲಿದೆ, ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಭೋಜನ, ಸಂಜೆ ಉಪಹಾರ, ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಂಘ ಬೆಳೆದು ಬಂದ ದಾರಿ: ಮಾನಂಜೆಯಂತಹ ಹಿಂದುಳಿದ ಈ ಗ್ರಾಮೀಣ ಪರಿಸರದಲ್ಲಿ ಈ ಸಂಘವು ಕೀರ್ತಿಶೇಷ ಮಾನಂಜೆ ನಾರಾಯಣ ರಾಯರ ಅಧ್ಯಕ್ಷತೆಯಲ್ಲಿ 15-05-1950ರಲ್ಲಿ ನೋಂದಾಯಿಸಿ, 07-06-1950 ರಂದು ಕೇವಲ 39 ಜನ ಸದಸ್ಯರಿಂದ ‘ಕಮಲಶಿಲೆ ವಿವಿಧೋದ್ದೇಶ ಸಹಕಾರ ಸಂಘ’ ಎಂಬ ನಾಮಾಂಕಿತದೊಂದಿಗೆ ಪ್ರಾರಂಭಗೊಂಡಿತು. ನಂತರ ಅಂದಿನಿಂದ ಇಂದಿನವರೆಗೆ ಕೆಲವು ಹೆಸರುಗಳನ್ನು ಪರಿವರ್ತಿಸಿಕೊಂಡು ಪ್ರಸ್ತುತ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ಕಮಲಶಿಲೆ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಹಕಾರ ರಂಗದಲ್ಲಿ ‘ಮಾನಂಜೆ ಸೊಸೈಟಿ’ ಅಂತಲೇ ಪ್ರಖ್ಯಾತಿಯನ್ನು ಹೊಂದಿದೆ. ಆಜ್ರಿ, ಕಮಲಶಿಲೆ, ಹಳ್ಳಿಹೊಳೆ ಮತ್ತು ಯಡಮೊಗೆ ಗ್ರಾಮಗಳ ಕೃಷಿಕರ, ಕೃಷಿ ಕಾರ್ಮಿಕರ ಕಲ್ಯಾಣಕ್ಕೆ ನೆರವು ನೀಡುತ್ತಾ ಬಂದಿದ್ದು. ಸದಸ್ಯರ ಸಹಕಾರದಿಂದ ಸಂಘವು ಪ್ರಗತಿಯ ಅನೇಕ ಮಜಲುಗಳನ್ನು ದಾಟ, ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡಿದೆ ಎಂದರು.
ಸಂಘವು 25-01-2026ಕ್ಕೆ 1900 ಸದಸ್ಯತ್ವ ಹೊಂದಿದ್ದು, 2.80 ಕೋಟಿ ಪಾಲು ಬಂಡವಾಳ, ರೂ. 217.05 ಕೋಟಿ ಠೇವಣಾತಿಗಳು, 230.06 ಕೋಟಿ ಸದಸ್ಯರ ಸಾಲ ಹೊರಬಾಕಿ ಇರುತ್ತದೆ. ಈವರೆಗೆ ಜಿಲ್ಲಾ ಬ್ಯಾಂಕ್ ಹಾಗೂ ಇತರ ಸಂಸ್ಥೆಗಳಲ್ಲಿ ಪಾಲು ಹಣ, ಕ್ಷೇಮನಿಧಿ ಇತ್ಯಾದಿ ಸೇರಿ ರೂ.80.00ಕೋಟಿ ವಿನಿಯೋಗಿಸಲಾಗಿದೆ. ಸಂಘವು ಕಟ್ಟಡ ಹಾಗೂ ಸ್ಥಿರಾಸ್ತಿ ಸೇರಿ ಸುಮಾರು 6.60 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ. 2024-25ನೇ ಸಾಲಿನಲ್ಲಿ ಶೇ.97ನ್ನು ಸಾಲ ವಸೂಲಾತಿಯಲ್ಲಿ ಪ್ರಗತಿ ಸಾಧಿಸಿ ಅಡಿಟ್‍ನಲ್ಲಿ ‘ಎ’ ಶ್ರೇಣಿಯನ್ನು ಪಡಕೊಂಡಿದೆ 25ನೇ ಸಾಲಿನಲ್ಲಿ 1177,00ಕೋಟಿ ವ್ಯವಹಾರ ನಡೆಸಿದ್ದು, ದಿನಾಂಕ 31-03-2025ಕ್ಕೆ ರೂ.3.56 ಕೋಟಿ ನಿವ್ವಳ ಲಾಭ ಗಳಿಸಿದೆ. ಸತತ ಏಳು ವರ್ಷಗಳಿಂದ ತನ್ನ ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡುತ್ತಾ ಬಂದಿದೆ ಎಂದರು.
ಅಮೃತಮಹೋತ್ಸವ ಆಚರಣೆಯ ಈ ಸುಸಂದರ್ಭದ ಅಂಗವಾಗಿ ಸಂಘದ ಹಳ್ಳಿಹೊಳೆ ಶಾಖೆಯಲ್ಲಿ ಸದಸ್ಯರ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಲು ಸುಸಜ್ಜಿತ ಗೋದಾಮು ನಿರ್ಮಾಣ, ಪ್ರಧಾನ ಕಛೇರಿಯಲ್ಲಿ ಒಂದನೆ ಮತ್ತು ಎರಡನೇ ಮಹಡಿಯನ್ನು ಸಂಪರ್ಕಿಸುವಂತೆ ಲಿಫ್ಟ್ ನಿರ್ಮಾಣ ಹಾಗೂ ಸಂಘದ ಕೇಂದ್ರ ಕಛೇರಿಯ ಎದುರುಗಡೆ ಸುಂದರವಾದ ಬಸ್ಸು ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಲಾಗಿದೆ ಎಂದರು.
ಅಮೃತಮಹೋತ್ಸವದ ಅಂಗವಾಗಿ ಸಂಘದ ಪ್ರಸ್ತುತ ಇರುವ ಪ್ರಥಮ 75 ಜನ ಸದಸ್ಯರಿಗೆ, ಹಾಗೂ ಸಂಘದಲ್ಲಿ ಈವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ 109 ಜನರಿಗೆ ಅವರ ಮನೆ ಮನೆಗೆ ತೆರಳಿ ಅವರ ಕುಟುಂಬದವರೊಂದಿಗೆ ಸನ್ಮಾನಿಸಿ ಗೌರವಿಸಿ ಸನ್ಮಾನ ಪತ್ರವನ್ನು ನೀಡುವ ಮೂಲಕ ಅಮೃತಮಹೋತ್ಸವದ ಕ್ಷಣವನ್ನು ಶಾಶ್ವತಗೊಳಿಸಲಾಗಿದೆ.
ಸಂಘದಲ್ಲಿ ಸದಸ್ಯರಿಂದ ವಿವಿಧ ನಮೂನೆಯ ಠೇವಣಾತಿಗಳನ್ನು ಸಂಗ್ರಹಿಸುತ್ತಿದ್ದು, ಸದಸ್ಯರಿಗೆ ರೂ. 32.00ಕೋಟಿ ಶೂನ್ಯ ಬಡ್ಡಿದರದ ಸಾಲ. ರೂ. 20.89ಕೋಟಿ ಶೇ.3.00ರ ಬಡ್ಡಿದದಲ್ಲಿ ಕೃಷಿ ಸಾಲ ವಿತರಿಸಿರುತ್ತೇವೆ. ಉತ್ಪತ್ತಿ ಈಡಿನ ಸಾಲ, ಚಿನ್ನಾಭರಣ ಈಡಿನ ಸಾಲ, ಕೃಷಿ ಓವರ್‍ಡ್ರಾನ್ಸ್ ಸಾಲ, ಸ್ಥಿರಾಸ್ತಿ ಖರೀದಿ ಸಾಲ, ಸ್ಥಿರಾಸ್ತಿ ಆಧಾರಿತ ಸಾಲ, ವಿದ್ಯಾಭ್ಯಾಸ ಸಾಲ, ನವೋದಯ ಸ್ವ-ಸಹಾಯ ಗುಂಪುಗಳಿಗೆ ಸಾಲ, ವೈಯುಕ್ತಿಕ ಉದ್ದೇಶದ ಸಾಲ, ಮಧುವೆ ಸಾಲ ಹಾಗೂ ಸದಸ್ಯರ ಅವಶ್ಯಕತೆಗನುಗುಣವಾಗಿ ಇನ್ನಿತರ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ ಎಂದರು.
ಸಂಘದ ಸದಸ್ಯರು ಮೃತಪಟ್ಟಲ್ಲಿ ಅವರ ಅಂತಿಮ ಸಂಸ್ಕಾರದ ಬಗ್ಗೆ ರೂ.8,000/ ಸದಸ್ಯರ ಮರಣ ಸಾಂತ್ವನ ನಿಧಿಯಿಂದ ಪರಿಹಾರವಾಗಿ ನೀಡುತ್ತಿದ್ದೇವೆ. ಸದಸ್ಯರ ಕುಟುಂಬದವರನ್ನು ಸಾಲಮುಕ್ತಗೊಳಿಸುವ ಉದ್ದೇಶದಿಂದ ಸದಸ್ಯರಿಂದ ನಿಗದಿತ ಮೊತ್ತದ ವಂತಿಗೆ ಪಡೆದು ಹಾಗೂ ಶೇ.50ನ್ನು ಸಂಘದ ವಂತಿಗೆಯಾಗಿ ನೀಡಿ ಸದಸ್ಯರ ಮರಣ ಪರಿಹಾರ ನೀಧಿ ಖಾತೆಯನ್ನು ಪ್ರಾರಂಬಿಸಿದ್ದು, ಅರ್ಹ ಸದಸ್ಯರು ಮೃತಪಟ್ಟಲ್ಲಿ ಸದಸ್ಯನು ಹೊಂದಿರುವ ಹೊರಬಾಕಿ ಸಾಲ ಅಥವಾ ರೂ. 3.00ಲಕ್ಷ ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಈ ನಿಧಿಯಿಂದ ಅವರ ಸಾಲಕ್ಕೆ ಯಾ ಸಾಲ ವಜಾವಟ್ಟು ಮಾಡಿ ಉಳಿಕೆಯಾದಲ್ಲಿ ಅವರ ನಾಮಿನಿದಾರರಿಗೆ ಪಾವತಿಸುವ ವ್ಯವಸ್ಥೆ ಇರುತ್ತದೆ.
ಕೇಂದ್ರ ಸರಕಾರದ ಯೋಜನೆಯಾದ ಹವಾಮಾನ ಆಧಾರಿತ ಬೇಳೆ ವಿಮಾ ಯೋಜನೆಗೆ ನಮ್ಮಲ್ಲಿನ ಶೇ.95 ಸದಸ್ಯರನ್ನು ಒಳಪಡಿಸಿ ಸುಮಾರು 65.00ಲಕ್ಷಕ್ಕೂ ಮಿಕ್ಕಿ ವಿಮಾಕಂತು ಸದಸ್ಯರಿಂದ ಸಂಗ್ರಹಿಸಿ ಪಾವತಿಸಿದ್ದೇವೆ. ಪ್ರತಿ ವರ್ಷ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ದಿನದಂದು ರಕ್ತದಾನ ಶಿಬಿರ ನಡೆಸುತ್ತಿದ್ದೇವೆ. ಪರಿಸರ ಕಾಳಜಿಯೊಂದಿಗೆ ಅಂತರ್ಜಲ ಮಟ್ಟ ಹೆಚ್ಚಿಸುವ ಜಾಗೃತಿ ಮೂಡಿಸುವ ಸಲುವಾಗಿ ಸಂಘದ ನಾಲ್ಕು ಶಾಖೆ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ವಿಧಾನವನ್ನು ಅಳವಡಿಸಿ ಜಲಜಾಗೃತಿಯ ಅರಿವು ಮೂಡಿಸಲಾಗುತ್ತಿದೆ ಎಂದರು.
ನಮ್ಮ ಸಂಘವು ಹಲವಾರು ಯೋಜನೆಗಳು ರಾಜ್ಯದಲ್ಲೇ ಪ್ರಥಮವಾಗಿ ಸಹಕಾರಿ ಸಂಘದಲ್ಲಿ ಅಳವಡಿಸಿರುವ ಹೆಗ್ಗಳಿಕೆ ಹೊಂದಿದೆ. ಸಂಘದ ಕಛೇರಿಗಳಿಗೆ ಮೊಸಾಯಿಕ್ ಅಳವಡಿಸಿರುವುದು, ಸಂಘದಲ್ಲಿ ಗಣಕೀಕರಣವನ್ನು ಅಳವಡಿಸಿರುವುದು, ಮದುವೆ ಹಾಗೂ ಇತರ ಧಾಮಿಕ ಕಾರ್ಯಗಳಿಗೆ ಸಾಲ ಸೌಲಭ್ಯ, ಸಂಘದಲ್ಲಿ ಬಟ್ಟೆ ವ್ಯಾಪಾರ, ವಾಹನ ಖರೀದಿ ಸಾಲ, ಸಣ್ಣ ವ್ಯಾಪಾರ ಮಾಡಲು ವ್ಯಾಪಾರ ಸಾಲ, ದೂರದರ್ಶನ ಹಾಗೂ ಡಿಶ್ ಎಂಟಿನಾ ಖರೀದಿಸಲು ಸಾಲ, ಪ್ರಿಡ್ಜ್ ಖರೀದಿ ಹಾಗೂ ಇತರ ಗ್ರಹಬಳಕೆ ಸಾಮಗ್ರಿಗಳನ್ನು ಖರಿದಿಸಲು ಸಾಲ ಸೌಲಭ್ಯ. ಮಕ್ಕಳ ಉನ್ನತ ವಿದ್ಯಾಬ್ಯಾಸಕ್ಕೆ ವಿದ್ಯಾಬ್ಯಾಸ ಸಾಲ, ಸದಸ್ಯರಿಗೆ ನೈರ್ಮಲ್ಯ ಕಾಪಾಡಲು ಶೌಚಾಲಯ ನಿರ್ಮಿಸಲು ಶೌಚಾಲಯ ನಿರ್ಮಾಣ ಸಾಲ, ಹಳ್ಳಿ ಪ್ರದೇಶದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದ ಕಾಲದಲ್ಲಿ ಸಾರಿಗೆ ಬಸ್ ಖರೀದಿಗೆ ಸಾಲ, ಕಾರ್ಯಕ್ಷೇತ್ರದ ಹೊರಗಿನ ಸದಸ್ಯರಿಗೆ ಸ್ಥಿರಾಸ್ತಿ ಅಡಮಾನ ಸಾಲ, ಸ್ಥಿರಾಸ್ತಿ ಖರೀದಿ ಸಾಲಗೃಹ ನಿರ್ಮಾಣ ಸಾಲ,ಹೊಸ ವಾಹನ ಖರೀದಿ ಸಾಲ, ವಾಹನ ಅಡಮಾನ ಸಾಲ, ಉತ್ಪತ್ತಿ ಈಡಿನ ಸಾಲ, ಕೃಷಿ ಸಾಲವನ್ನು ಹೊಂದಿದ ರೈತರಿಗೆ ಕೃಷಿ ಓವರ್ ಡ್ರಾಪ್ಸ್ ಸಾಲ, ಸಂಘದ ಎ ತರಗತಿ ಸದಸ್ಯ ಮರಣಹೊಂದಿದರೆ ಅಂತ್ಯಕ್ರಿಯೆಗೆ ಪ್ರಸ್ತುತ ರೂ 8000 ನೀಡಲಾಗುತ್ತಿದೆ. ಸಂಘದ ಸಾಲಗಾರ ಸದಸ್ಯನು ಮರಣ ಹೊಂದಿದರೆ ಅಂತಹ ಸದಸ್ಯನ ಸಾಲವು ಕುಟುಂಬದವರಿಗೆ ಹೊರೆಯಾಗಬಾರದೆನ್ನುವ ಉದ್ದೇಶದಿಂದ ಸಾಲಗಾರ ಸದಸ್ಯರ ಮರಣ ಪರಿಹಾರ ಯೋಜನೆ, ಪ್ರಸ್ತುತ ರೂ. 300000 ನೀಡಲಾಗುತ್ತದೆ. ಐಎಂಬಿಪಿ ಮಿತಿ – ಎ ತರಗತಿ ಸದಸ್ಯರಿಗೆ 3 ಕೋಟಿ ಹಾಗೂ ಸಿ ತರಗತಿ ಸದಸ್ಯರಿಗೆ 2 ಕೋಟಿ, ದೇವಸ್ಥಾನಗಳಲ್ಲಿ ನಿರಂತರ ಪೂಜೆ ನೆಡೆಸಲು, ಶಾಲೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ವಿದ್ಯಾರ್ಥಿವೇತನ ನೀಡಲು ಹಾಗೂ ನಿರಂತರ ಬಡ್ಡಿ ಹಣ ನೀಡುವ ಉದ್ದೇಶದಿಂದ ಪ್ರಾರಂಭಗೊಳಿಸಿದ ಯೋಜನೆ ನಿರಂತರ ಠೇವಣಿ ಯೋಜನೆ, ಇದರಲ್ಲಿ ತೊಡಗಿಸಿದ ಠೇವಣಿಗೆ ಇತರ ಠೇವಣಿಗಳಿಗಿಂತ ಅತ್ಯಧಿಕ ಬಡ್ಡಿ, ಕಾರ್ಯಕ್ಷೇತ್ರದ ಹೊರಗೆ ಸಿದ್ಧಾಪುರದಲ್ಲಿ ಸಂಘದ ಶಾಖೆ ಮಾಡಿರುವುದು, ಶೂನ್ಯ ಬಡ್ಡಿದರದಲ್ಲಿ ಐದು ಲಕ್ಷದವರೆಗೆ ಬೆಳೆಸಾಲ ನೀಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಘಧ ಉಪಾಧ್ಯಕ್ಷರಾದ ಸುದೀಪ ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಮಂಜುನಾಥ ನಾಯ್ಕ, ನಿರ್ದೇಶಕರಾದ ಬಿ.ಮಂಜುನಾಥ ರಾವ್, ರವೀಂದ್ರ, ಗುರುರಾಜ ನಾಯ್ಕ ಉಪಸ್ಥಿತರಿದ್ದರು.











