ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಕಾರ್ಯಗಾರವು ಜೆ.ಸಿ.ಐ ಇವರ ಸಹಭಾಗಿತ್ವದಲ್ಲಿ ಎಕ್ಸಲೆಂಟ್ ಪ್ರೌಢಶಾಲೆ, ಸುಣ್ಣಾರಿ ಇಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಜಗದೀಶ್ ಜೋಗಿಯವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ವಿದ್ಯಾರ್ಥಿಗಳ ಪರೀಕ್ಷಾ ಆತಂಕವನ್ನು ದೂರಮಾಡುತ್ತಾ ಸಮಯವು ಅತ್ಯಂತ ಮಹತ್ವಪೂರ್ಣವಾಗಿದ್ದು, ಕಳೆದು ಹೋದ ಸಮಯ ಮರಳಿಬಾರದು, ಎನ್ನುವ ಕಟುಸತ್ಯವನ್ನು ಅರಿತು ಶಿಸ್ತುಬದ್ಧವಾದ ಅಧ್ಯಯನ ನಡೆಸಬೇಕೆಂದರು. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಅಧ್ಯಯನ ವೇಳಾಪಟ್ಟಿ ಹಾಕಿಕೊಂಡು ನಿರಂತರ ಓದುವುದು ಮತ್ತು ಓದಿದ ವಿಚಾರ ಹೆಚ್ಚು ಮನನ ಮಾಡಿಕೊಳ್ಳುವುದರಿಂದ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜೆ.ಸಿ.ಐ ಕುಂದಾಪುರ ಇದರ ಕಾರ್ಯದರ್ಶಿಗಳಾದ ಕಾರ್ತಿಕ್ ಶೆಟ್ಟಿಯವರು ಪ್ರಾಸ್ತವಿಕವಾಗಿ ಮಾತನಾಡಿದರು. ಜೆ.ಸಿ.ಐ ಕುಂದಾಪುರ ಇದರ ಅಧ್ಯಕ್ಷರಾದ ಸುಧಾಕರ್ ಕಾಂಚನ್‍ರವರು ಜೆ.ಸಿ.ಐ ನ ಸಮಾಜ ಸೇವೆಯ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳು ಕ್ರಮಬದ್ಧವಾಗಿ ಓದಿ ಹೆಚ್ಚು ಅಂಕಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ, ಎಕ್ಸಲೆಂಟ್ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾದ ಸಂದೇಶ್‍ರವರು ಮಾತನಾಡುತ್ತಾ “ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಬೇಕು. ಒಮ್ಮೆ ಅಧ್ಯಯನಕ್ಕೆ ಕುಳಿತರೆ ಕನಿಷ್ಠ ಪಕ್ಷ ಒಂದು ಗಂಟೆಯ ಕಾಲ ವಿವೇಚನೆಯಿಂದ ಓದಿ ತದನಂತರ ಅದನ್ನು ಬರೆದು ಅಭ್ಯಾಸ ಮಾಡಿದಾಗ ಹೆಚ್ಚು ಅರ್ಥಪೂರ್ಣವಾಗಿರುತ್ತದೆ” ಎಂದು ಹೇಳಿದರು.
ಮುಖ್ಯಶಿಕ್ಷಕಿಯಾದ ಸುರೇಖಾ ಆಚಾರ್ಯರವರು ಸ್ವಾಗತಿಸಿ, ಸಮಾಜ-ವಿಜ್ಞಾನ ಶಿಕ್ಷಕಿಯಾದ ಪ್ರೇಮಾರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.











