ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮೂಡ್ಲಕಟ್ಟೆಯ ಐ.ಎಂ.ಜೆ ವಿದ್ಯಾ ಸಂಸ್ಥೆಗಳಿಗೆ ಒಳಪಟ್ಟ ಐ.ಎಂ.ಜೆ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾ ಸಂಸ್ಥೆ (ಐ.ಎಂ.ಜೆ.ಐ.ಎಸ್.ಸಿ) ತನ್ನ ಮೊದಲ ಶೈಕ್ಷಣಿಕ ವರ್ಷದಲ್ಲೇ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳೆಯರ ತ್ರೋ ಬಾಲ್ ಪಂದ್ಯಾಟವನ್ನು ಆಯೋಜಿಸುವ ಜವಾಬ್ದಾರಿ ಹೊತ್ತಿದೆ. ಉಡುಪಿ ಜೋನ್ ಮಟ್ಟದ ಪಂದ್ಯಗಳನ್ನು ಆಯೋಜಿಸುವುದರೊಂದಿಗೆ ಅದರ ಮುಂದಿನ ಹಂತವಾಗಿ ಉಡುಪಿ-ಮಂಗಳೂರಿನ ಅಂತರ್ ಜೋನ್ ಪಂದ್ಯಗಳನ್ನು ನಡೆಸಿಕೊಡಲಿದೆ. ಮೇ 17, 2023 ರಿಂದ ಮೇ 19, 2023 ರ ವರೆಗೆ ಕಾಲೇಜಿನ ಕ್ರೀಡಾಂಗಣದಲ್ಲಿ ವಿಶ್ವ ವಿದ್ಯಾಲಯ ಮಟ್ಟದ ತ್ರೋ ಬಾಲ್ ಪಂದ್ಯಾಟವನ್ನು ಆಯೋಜನೆ ಮಾಡುತ್ತಿದೆ ಎಂದು ಐ.ಎಂ.ಜೆ.ಐ.ಎಸ್.ಸಿ ಉಪ ಪ್ರಾಂಶುಪಾಲರಾದ ಜಯಶೀಲ್ ಕುಮಾರ್ ಹೇಳಿದರು.
ಅವರು ಕುಂದಾಪುರದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪಂದ್ಯಾಟವನ್ನು ಮೇ17 ಬೆಳಿಗ್ಗೆ 9.30ಕ್ಕೆ ಮಂಗಳೂರು ವಿಶ್ವನಿದ್ಯಾನಿಲಯದ ಡಾ.ಕಿಶೋರ್ ಕುಮಾರ ಸಿ.ಕೆ ಉದ್ಘಾಟಿಸಲಿದ್ದಾರೆ. ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ ಎಸ್.ಆರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಐ.ಎಂ.ಜೆ ವಿದ್ಯಾ ಸಂಸ್ಥೆಗಳ ಚೇರ್‍ಮನ್ ಸಿದ್ದಾರ್ಥ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೇ 19ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಐ.ಎಂ.ಜೆ ವಿದ್ಯಾ ಸಂಸ್ಥೆಗಳ ಚೇರ್‍ಮನ್ ಸಿದ್ದಾರ್ಥ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸೃಷ್ಟಿ ಇನ್‍ಪೊಟೆಕ್‍ನ ಎಂ.ಡಿ ಹರ್ಷವರ್ಧನ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು ವಿ.ವಿಯ ಕ್ರೀಡಾ ವಿಭಾಗದ ನಿರ್ದೇಶಕ ಡಾ.ಜೇರಾಲ್ಡ್ ಸಂತೋಷ್ ಡಿಸೋಜ ಭಾಗವಹಿಸಲಿದ್ದಾರೆ ಎಂದರು.
ಐ.ಎಂ.ಜೆ.ಐ.ಎಸ್.ಸಿ ಡಾ.ಪ್ರತಿಭಾ ಎಂ.ಪಟೇಲ್ ಮಾತನಾಡಿ, 2022-23ರಲ್ಲಿ ರಲ್ಲಿ ಪ್ರಾರಂಭಗೊಂಡು ಕುಂದಾಪುರದಲ್ಲಿ ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ವಿಶ್ವಾಸದ ಆಯ್ಕೆಯಾದ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವಲ್ಲಿ ಮುಂಚೂಣಿಯಲ್ಲಿದೆ. ನವ ರಾಷ್ಟ್ರೀಯ ಶಿಕ್ಷಣ ನೀತಿಯ ವೈಶಿಷ್ಟ್ಯವನ್ನು ವಿದ್ಯಾರ್ಥಿಗಳಿಗೆ ತಲುಪಿಸುತ್ತಾ ಅವರಲ್ಲಿ ಕ್ರೀಡೆ ಹಾಗು ಇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರೇಮ ಮತ್ತು ಆಯೋಜನ ಕೌಶಲ್ಯ ಬೆಳಸಿಕೊಳ್ಳಲು ಇಂತಹ ಪಂದ್ಯಾವಳಿಗಳು ಮುಖ್ಯಪಾತ್ರ ವಹಿಸುತ್ತದೆ ಎಂಬ ಐ ಎಂ ಜೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಸಿದ್ದಾರ್ಥ ಜೆ ಶೆಟ್ಟಿ ರವರ ದೃಷ್ಟಿಕೋನದಲ್ಲಿ ಸಂಸ್ಥೆ ಮುನ್ನಡೆಯುತ್ತಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ರಾಮಕೃಷ್ಣ ಹೆಗ್ಡೆ, ದೈ.ಶಿ. ನಿರ್ದೇಶಕ ಪ್ರವೀಣ್ ಖಾರ್ವಿ ಉಪಸ್ಥಿತರಿದ್ದರು.











