ಕುಂದಾಪುರ ಮಿರರ್ ಸುದ್ದಿ…

ಕೋಟ: ಕಳೆದೊಂದು ವಾರದಿಂದ ಸುರಿಯುತ್ತಿರುವ ಬಾರಿ ಮಳೆಗೆ ಕೋಟ ಗ್ರಾಮಪಂಚಾಯತ್ ಸೇರಿದಂತೆ ಸುತ್ತಮುತ್ತಲಿನ ಕರಾವಳಿ ಪ್ರದೇಶದಲ್ಲಿ ಕೃತಕ ನೆರೆ ಸೃಷ್ಠಿಯಾಗಿದೆ. ಇದಕ್ಕೆ ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಪಾರಂಪಳ್ಳಿ ತೋಡ್ಕಟ್ಟು ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆಗೆ ಅಡ್ಡಲಾಗಿ ಹಾಕಲಾದ ಮಣ್ಣು ಕಾರಣ ಈ ಹಿನ್ನಲೆಯಲ್ಲಿ ಸ್ಥಳೀಯ ಪಂಚಾಯತ್‍ಗಳ ಮನವಿಯ ಮೇರೆಗೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಪ್ರಸ್ತುತ ಅರೆಬರೆ ತೆರವುಗೊಳಿಸಿದ ಮಣ್ಣು ಹಾಗೂ ಅಲ್ಲಿ ಅಳವಡಿಸಲಾದ ತಾತ್ಕಾಲಿಕ ಕಾಂಕ್ರೀಟ್ ತೆರವುಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕೃಷಿಕರು ಮತ್ತು ಸ್ಥಳೀಯಾಡಳಿ ಜನಪ್ರತಿನಿಧಿಯ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟು ಶಾಸಕರ ಮಧ್ಯಸ್ಥಿಕೆಯಲ್ಲಿ ಶಮನಗೊಂಡಿತು.
ಈ ವೇಳೆ ಮಾತನಾಡಿದ ಕೋಟ ರೈತಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ ಕಳೆದ ವರ್ಷ ಇದೇ ಸ್ಥಿತಿ ನಿರ್ಮಾಣಗೊಂಡಿದೆ ಮಳೆಗಾಲ ನೀರು ಸರಾಗವಾಗಿ ಹರಿಯಲ್ಪಡಬೇಕೆ ವಿನಹ ಸೇತುವೆ ನೆಪದಲ್ಲಿ ಮಣ್ಣು ತೆರವುಗೊಳಿಸದ ಹಿನ್ನಲೆಯಲ್ಲಿ ಈ ಕೃತಕ ನೆರೆ ಸೃಷ್ಠಯಾಗಿದೆ,ಮಣ್ಣು ಹಾಗೂ ತಾತ್ಕಾಲಿಕ ಕಾಂಕ್ರೀಟ್ ಸ್ಲಾಬ್ ತೆರವುಗೊಳಿಸಬೇಕು. ಈ ದಿಸೆಯಲ್ಲಿ ಉಂಟಾದ ನೆರೆಯಿಂದ ಸಾಕಷ್ಟು ಭತ್ತದ ಕೃಷಿ ಭೂಮಿ ಹಾನಿಗೊಂಡಿದೆ ಇದಕ್ಕೆ ಸೂಕ್ತ ಪರಿಹಾರ ಒದಗಿಸಲು ಶಾಸಕರ ಬಳಿ ಮನವಿಮಾಡಿದರು.
ಕಾಂಡ್ಲ ವನ ತೆರವುಗೊಳಿಸಿ ಆಗ್ರಹ
ಉಪ್ಪು ನೀರಿನ ಹೊಳೆಯಲ್ಲಿ ಕಾಂಡ್ಲ ಸಸಿಗಳು ಬಾರಿ ಪ್ರಮಾಣದಲ್ಲಿ ನೀರಿನಲ್ಲಿ ಹರಡಿಕೊಂಡಿದೆ ಇದರಿಂದ ಹೊಳೆಯಲ್ಲಿ ಸಾಕಷ್ಟು ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿದೆ. ಅಲ್ಲದೆ ನೀರು ಸರಾಗವಾಗಿ ಹರಿಯಲಾಗದೆ ಸಮಸ್ಯೆ ಸೃಷ್ಠಿಸುತ್ತಿದೆ ನೀರಿನಲ್ಲಿ ಹರಡಿಕೊಂಡಿರುವ ಕಾಂಡ್ಲ ಸಸಿಗಳನ್ನು ತೆರವುಗೊಳಿಸದರೆ ಯಾವುದೇ ರೀತಿಯ ಸಮಸ್ಯೆ ಎದುರಾಗದು ಶೀಘ್ರಗತಿಯಲ್ಲಿ ಇದಕ್ಕೆ ಪರಿಹಾರಕಂಡುಕೊಳ್ಳಲು ಶಾಸಕರಲ್ಲಿ ರೈತ ಸಮುದಾಯ ಮನವಿ ಮಾಡಿತು.
ಕಾಮಗಾರಿ ವೇಗಗೊಳಿಸಿ ಶಾಸಕರ ಸೂಚನೆ
ಕೃಷಿಕರಿಗೆ ಸಮಸ್ಯೆ ನೀಡಿ ಕಾಮಗಾರಿ ನಿಧಾನಗೊಳಿಸುವುದು ಸಮಂಜಸವಲ್ಲ ಸೇತುವೆ ಕಾಮಗಾರಿಗೆ ವೇಗ ನೀಡಿ ಮುಂದಿನ ದಿನಗಳಲ್ಲಿಈ ರೀತಿಯ ಪ್ರಸಂಗ ಎದುರಾಗದಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ವೇಳೆ ಸಾಲಿಗ್ರಾಮ ಪ.ಪಂ ಸದಸ್ಯ ರಾಜು ಪೂಜಾರಿ ಕಾರ್ಕಡ, ನಾಮನಿರ್ದೇಶಿತ ಸದಸ್ಯ ಕರುಣಾಕರ ಪೂಜಾರಿ, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಸದಸ್ಯರಾದ ಸಂತೋಷ ಪ್ರಭು,ಶಿವರಾಮ ಶೆಟ್ಟಿ, ಸ್ಥಳೀಯ ಮುಖಂಡರಾದ ಜಯೇಂದ್ರ ಪೂಜಾರಿ, ಕೇಶವ ಕರ್ಕೇರ, ರೈತ ಮುಖಂಡರಾದ ಭಾಸ್ಕರ್ ಶೆಟ್ಟಿ ಮಣೂರು, ರವೀಂದ್ರ ಐತಾಳ್ ಪಾರಂಪಳ್ಳಿ, ರಮೇಶ್ ಪೂಜಾರಿ ಪಡುಕರೆ, ಮಹಾಬಲ ಶೆಟ್ಟಿ,ಗೋಪಾಲ ಕಾಸನಗುಂದು ಮತ್ತಿತರರು ಇದ್ದರು.











