ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ರಾಜ್ಯದಲ್ಲಿ ಒಟ್ಟು 6.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದ್ದು ವಾರ್ಷಿಕ ಕೊಬ್ಬರಿ ಉತ್ಪಾದನೆ 2.18 ಲಕ್ಷ ಮೆಟ್ರಿಕ್ ಟನ್ ನಷ್ಟಿದೆ. ಇಂತಹ ಪ್ರಮುಖ ತೋಟಗಾರಿಕಾ ಬೆಳೆಯಾದ ಕೊಬ್ಬರಿ ಬೆಲೆ ಹಿಂದೆಂದೂ ಕೇಳರಿಯದ ಪ್ರಮಾಣದಲ್ಲಿ ಕ್ವಿಂಟಾಲ್ ಗೆ 6-7 ಸಾವಿರಕ್ಕೆ ಇಳಿದಿರುವುದು ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದ ಬೆಳೆಗಾರರವಲ್ಲಿ ಆತಂಕ ಮೂಡಿಸಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆಪಾದಿಸಿದೆ.
ಇಂದು ರಾಜ್ಯದಾದ್ಯಂತ ತೆಂಗು ಬೆಳೆಗಾರರು ಪ್ರತಿಭಟನೆ ನಡೆಸುವ ಅಂಗವಾಗಿ ಕುಂದಾಪುರದಲ್ಲಿ ರೈತ ಸಂಘದ ನಿಯೋಗ ಕುಂದಾಪುರ ತಹಸೀಲ್ದಾರ್ ಶೋಭಾ ಲಕ್ಷ್ಮೀ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದರು.
ಕೇಂದ್ರ ಸರ್ಕಾರದ ತಪ್ಪು ಆಮದು ನೀತಿಯಿಂದ ಹೊರ ದೇಶಗಳಿಂದ ತೆಂಗು ತೆಂಗಿನ ಉತ್ಪನ್ನಗಳು ಮತ್ತು ಪಾಮಾಯಿಲ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.ಇದರಿಂದ ತೆಂಗು ಬೆಳೆಯುವ ರೈತರಿಗೆ ಮಾರುಕಟ್ಟೆ ಸಿಗುತ್ತಿಲ್ಲ.ರಾಜ್ಯ ಸರ್ಕಾರ ರಾಜ್ಯದ ರೈತರುಗಳನ್ನು ರಕ್ಷಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.
ರಾಜ್ಯ ತೋಟಗಾರಿಕ ಇಲಾಖೆಯು ಕೇಂದ್ರ ಸರ್ಕಾರದ ಕ್ರಷಿ ವೆಚ್ಚ ಮತ್ತು ದರ ಆಯೋಗ (CACP)ಕ್ಕೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 16,730/- ರೂಪಾಯಿಗಳನ್ನು ನೀಡಬೇಕು ಎಂದು ಉತ್ಪಾದನಾ ವೆಚ್ಚದ ಆಧಾರದಲ್ಲಿ ಶಿಫಾರಸ್ಸು ಮಾಡಿದೆ ಈ ಕೂಡಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಹಾಗೂ ಇದುವರೆಗೂ ನೆಪೆಡ್ ಮೂಲಕ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಬ್ಬರಿ ಖರೀದಿಸುತ್ತಿರುವುದನ್ನು ಮುಂದುವರಿಸಬೇಕು ಮತ್ತು ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು ಇಡೀ ವರ್ಷ ಈ ಮಾರುಕಟ್ಟೆ ವ್ಯವಸ್ಥೆ ಇರಬೇಕು ಅಲ್ಲದೆ ಕ್ರಷಿ ತಜ್ಞ ಡಾ.ಎಂ.ಎಸ್ ಸ್ವಾಮಿನಾಥನ್ ಶಿಫಾರಸ್ಸು ಜಾರಿ ಮಾಡಬೇಕು. ಎಂದು ನಿಯೋಗ ತಿಳಿಸಿದೆ.
ನಿಯೋಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಚಂದ್ರಶೇಖರ ವಿ,ಕೆ.ಶಂಕರ್,ಮಹಾಬಲ ವಡೇರಹೋಬಳಿ, ಎಚ್ ನರಸಿಂಹ, ಸುರೇಶ್ ಕಲ್ಲಾಗರ, ಚಿಕ್ಕ ಮೊಗವೀರ, ಸಂತೋಷ ಹೆಮ್ಮಾಡಿ ಇದ್ದರು.











