ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಳೆದ 11 ವರ್ಷಗಳ ಹಿಂದೆ ವಿಕೃತಕಾಮಿಗಳ ಅಟ್ಟಹಾಸಕ್ಕೆ ಅತ್ಯಾಚಾರಕ್ಕೊಳಗಾಗಿ ಕ್ರೂರವಾಗಿ ಹತ್ಯೆಯಾಗಿದ್ದ ಅಪ್ರಾಪ್ತ ಬಾಲಕಿ ಸೌಜನ್ಯಳಿಗೆ ನಿರಂತರ ಹೋರಾಟದ ನಡುವೆಯೂ ನ್ಯಾಯ ಮರೀಚಿಕೆಯಾಗಿದೆ ಎಂದು ಆರೋಪಿಸಿ ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾಗರೀಕರು ಹೋರಾಟಕ್ಕೆ ಸಜ್ಜುಗೊಂಡಿದ್ದಾರೆ. ಸೌಜನ್ಯ ಸಾವಿನ ಹಿಂದಿನ ಶಕ್ತಿ ಬಹಿರಂಗವಾಗಬೇಕು. ಆರೋಪಿಗಳನ್ನು ಪತ್ತೆ ಹಚ್ಚಿ ಗಲ್ಲುಶಿಕ್ಷೆ ನೀಡಬೇಕು, ನಿರಪರಾಧಿ ಸಂತೋಷ್ ರಾವ್ ಗೆ ಸಮಾಜದಲ್ಲಿ ಸಮಾನ ಗೌರವ ಸಿಗಬೇಕು ಎಂಬ ಕೂಗು ಪಕ್ಷಾತೀತವಾಗಿ, ಧರ್ಮಾತೀತವಾಗಿ ಕೇಳಿ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 25ರಂದು ಬೆಳಿಗ್ಗೆ 10 ಗಂಟೆಗೆ ಕುಂದಾಪುರದಲ್ಲಿ ಸಮಾನಮನಸ್ಕರಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ. ನೆಹರೂ ಮೈದಾನದಿಂದ ಕುಂದಾಪುರದ ಮುಖ್ಯರಸ್ತೆಯಲ್ಲಿ ಸಾಗಿ ಬರುವ ಮೆರವಣಿಗೆ ಹೊಸ ಬಸ್ ನಿಲ್ದಾಣದ ವರೆಗೆ ಸಾಗಿ ವಾಪಾಸು ಬಂದು ಕುಂದಾಪುರದ ಶಾಸ್ತ್ರೀವೃತ್ತದ ಸಮೀಪ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸುಧೀರ್ ಮಲ್ಯಾಡಿ ಹೇಳಿದ್ದಾರೆ.
ಮಾತನಾಡಿದ ಅವರು, ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಮಾಜದ ವಿರುದ್ಧ ಅಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಉದ್ದೇಶ ನಾವು ಹೊಂದಿಲ್ಲ. ಕ್ರೂರವಾಗಿ ಅತ್ಯಾಚಾರವಾಗಿ ಕೊಲೆಯಾದ, ಸೌಜನ್ಯಗೆ ನ್ಯಾಯ ಸಿಗಬೇಕಿದೆ. ಅಲ್ಲದೇ ಹನ್ನೊಂದು ವರ್ಷಗಳ ಕಾಲ ಹಿಂಸೆ ಅನುಭವಿಸಿದ ಸಂತೋಷ್ ರಾವ್ ಅವರಿಗೆ ಸರ್ಕಾರ ನೀಡಬೇಕಾದ ಗೌರವವನ್ನೂ ನೀಡಬೇಕಿದೆ. ಇದೆಲ್ಲದರ ಬಗ್ಗೆ ಸಮಾನಮನಸ್ಕರು ಒಟ್ಟು ಸೇರಿ ಆಗ್ರಹಿಸಲಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಸೌಜನ್ಯಾ ನ್ಯಾಯಕ್ಕಾಗಿ ಹೋರಾಟದ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯಾ ಕುಟುಂಬ ಭಾಗವಹಿಸಲಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ನ್ಯಾಯಕ್ಕಾಗಿ ಆಗ್ರಹದ ಮಾತುಗಳನ್ನು ಆಡಲಿದ್ದಾರೆ ಎಂದು ಸುಧೀರ್ ಮಲ್ಯಾಡಿ ಹೇಳಿದ್ದಾರೆ. ಇದೊಂದು ಸ್ವಯಂಪ್ರೇರಿತವಾಗಿ ನಡೆಯುವ ಪ್ರತಿಭಟನೆಯಾಗಿದ್ದು, ಪ್ರತಿಯೊಬ್ಬರು ತಮ್ಮ ಸ್ವಯಂ ಇಚ್ಚೆಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು 5ಸಾವಿರಕ್ಕೂ ಅಧಿಕ ಮಂದಿ ಸೇರುವ ಸಾಧ್ಯತೆ ನಿರೀಕ್ಷಿಸಲಾಗಿದೆ.











