ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಕಾನೂನು ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹದಿ ಹರೆಯದ ಮಕ್ಕಳು ಕಾನೂನು ಉಲ್ಲಂಘನೆ ಮಾಡಿ, ಅಪರಾಧ ಚಟವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಹೆಚ್ಚಾಗುತ್ತಿದ್ದು, ಇವರಲ್ಲಿ ಬಹುತೇಕರಿಗೆ ಕಾನೂನಿನ ಅರಿವೇ ಇರುವುದಿಲ್ಲ. ಪೋಷಕರು ಮಕ್ಕಳಿಗೆ ಈ ಬಗ್ಗೆ ತಿಳಿ ಹೇಳಬೇಕಾಗಿದೆ. ಆತ್ಮಸಾಕ್ಷಿಯೇ ನಿಜವಾದ ಕಾನೂನು. ಆತ್ಮ ಸಾಕ್ಷಿಗೆ ವಂಚನೆ ಮಾಡದೇ ಇರುವುದೇ ಕಾನೂನಿನ ಉತ್ತಮ ಪಾಲನೆ ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಹೇಳಿದರು.
ಅವರು ಜೇಸಿಐ ಕುಂದಾಪುರ ಸಿಟಿ ಇದರ ಸಪ್ತಾಹ ಸೆ.೯ ರಿಂದ ಸೆ.೧೫ರವರೆಗೆ ಜೂನಿಯರ್ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯಲಿದ್ದು, ಶನಿವಾರ ಸಂಜೆ ಸಪ್ತಾಹವನ್ನು ಉದ್ಘಾಟಿಸಿ, ಕಾನೂನಿನ ಅರಿವು ಕುರಿತು ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಽಶ ರಾಜು ಎನ್. ಮಾತನಾಡಿದರು. ಕುಂದಾಪುರದ ಹೋಲಿ ರೋಜರಿ ಚರ್ಚ್‌ನ ಧರ್ಮಗುರು ವಂ| ಸ್ಟ್ಯಾನಿ ತಾವ್ರೊ ಆಶೀರ್ವಚಿಸಿದರು.
ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷೆ ಡಾ| ಸೋನಿ ಡಿಕೋಸ್ಟಾ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರದ ಉದ್ಯಮಿ ರೋನಾಲ್ಡ್ ರೊಡ್ರಿಗಸ್ ಅವರಿಗೆ ಬ್ಯುಸಿನೆಸ್ ಐಕಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭಾ ಕಾರ್‍ಯಕ್ರಮದ ಬಳಿಕ ಹೆಮ್ಮಾಡಿಯ ಜನತಾ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಂದ ನವರಂಗ್ ಸಾಂಸ್ಕೃತಿಕ ಕಾರ್‍ಯಕ್ರಮ ಪ್ರದರ್ಶನಗೊಂಡಿತು.
ಕುಂದಾಪುರ ಆಸ್ಪತ್ರೆಯ ಜನರಲ್ ಸರ್ಜನ್ ಡಾ| ಮಹೇಂದ್ರ ಕುಮಾರ್ ಶೆಟ್ಟಿ, ರೆಡ್‌ಕ್ರಾಸ್ ಕುಂದಾಪುರದ ಸಭಾಪತಿ ಜಯಕರ ಶೆಟ್ಟಿ, ಜೆಸಿಐ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ನಿಕಟಪೂರ್ವಾಧ್ಯಕ್ಷ ಅಭಿಲಾಷ್ ಬಿ.ಎ., ಸಪ್ತಾಹ ಸಭಾಪತಿ ರಾಘವೇಂದ್ರ ಕುಲಾಲ್, ಸಂಚಾಲಕ ನಾಗೇಶ ನಾವಡ, ಕಾರ್‍ಯದರ್ಶಿಗಳಾದ ವಿಜಯ ಭಂಡಾರಿ, ಸಂದೇಶ್ ಶೆಟ್ಟಿ, ಖಜಾಂಚಿ ಶ್ರೀಧರ ಸುವರ್ಣ, ಸಂಯೋಜಕಿ ಪ್ರೇಮ ಡಿ’ಕುನ್ಹ, ಯುವ ಜೆಸಿ ಅಧ್ಯಕ್ಷೆ ಚಂದ್ರಿಕಾ ಕಾಮತ್, ಸದಸ್ಯರು ಉಪಸ್ಥಿತರಿದ್ದರು.
ಪೂರ್ವಾಧ್ಯಕ್ಷ ರಾಘವೇಂದ್ರ ಚರಣ್ ನಾವಡ ಪರಿಚಯಿಸಿ, ಸದಸ್ಯೆ ಡಾ| ಸರೋಜಾ ಎಂ. ಕಾರ್‍ಯಕ್ರಮ ನಿರೂಪಿಸಿದರು.











