ಕುಂದಾಪುರ ಮಿರರ್ ಸುದ್ದಿ..
ಗಂಗೊಳ್ಳಿ : ಗಂಗೊಳ್ಳಿಯಲ್ಲಿ ನಡೆದ ಬೋಟ್ ಅಗ್ನಿ ದುರಂತ ಸ್ಥಳಕ್ಕೆ ಮಾಜಿ ಸಚಿವ ಪ್ರಮೋದ ಮಧ್ವರಾಜ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಸ್ಥಳೀಯ ಮೀನುಗಾರ ಮುಖಂಡರು ಮತ್ತು ನಷ್ಟಕ್ಕೆ ಒಳಗಾದ ಬೋಟ್ ಮಾಲೀಕರ ಜೊತೆ ಚರ್ಚೆ ನಡೆಸಿ ದುರಂತದ ಬಗ್ಗೆ ಬೇಸರ ವ್ಯಕ್ತಪಡಿಸಿ ಮೀನುಗಾರರಿಗೆ ಧೈರ್ಯ ತುಂಬಿದರು.
ಬೋಟ್ ಅಗ್ನಿ ದುರಂತದಲ್ಲಿ ಕೋಟ್ಯಾಂತರ ರೂ. ನಷ್ಟ ಉಂಟಾಗಿದೆ. ಬೋಟ್ ಮಾಲೀಕರು ಮತ್ತು ಮೀನುಗಾರರು ಅತಂತ್ರರಾಗಿದ್ದಾರೆ. ಮೀನುಗಾರರು ಬದುಕು ಕಟ್ಟಿಕೊಳ್ಳಲು ಮತ್ತು ಹೊಸ ಬೋಟ್ ನಿರ್ಮಾಣ ಮಾಡಲು ಸರಕಾರ ಸ್ಪಂದಿಸಬೇಕು. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಗರಿಷ್ಠ ಪರಿಹಾರ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಮನವಿ ಮಾಡುವುದಾಗಿ ಹೇಳಿದ ಅವರು, ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತಂದು ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡುವುದಾಗಿ ಅವರು ಹೇಳಿದರು.
ಮತ್ಸ್ಯೋದ್ಯಮಿ ಆನಂದ ಸಿ.ಕುಂದರ್, ಸ್ಥಳೀಯ ಬೋಟ್ ಮಾಲೀಕರು, ಮೀನುಗಾರ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.











