ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶತಕೋಟಿ ಭಾರತೀಯರ ಶತಮಾನಗಳ ಕನಸು ಅಯೋಧ್ಯೆಯ ಶ್ರೀ ರಾಮ ಮಂದಿರ ಇದೀಗ ರಾಷ್ಟ್ರಕ್ಕೆ ಸಮರ್ಪಣೆಯಾಗುತ್ತಿರುವ ಈ ಸಂದರ್ಭದಲ್ಲಿ ನೇರ ರೈಲು ಸಂಪರ್ಕದ ಮೂಲಕ ಕುಂದಾಪುರವನ್ನು ಅಯೋಧ್ಯೆ ಜೊತೆಗೆ ಬೆಸೆಯುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಕೆಂದ್ರ ಸರ್ಕಾರ ಕ್ರಮ ವಹಿಸಬೇಕು ಎಂದು ಕುಮದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗಣೇಶ್ ಪುತ್ರನ್ ಹೇಳಿದ್ದಾರೆ.
ಅಯೋಧ್ಯೆಯನ್ನು ದೇಶದ ಮೂಲೆ ಮೇಲೆಗಳ ಜೊತೆಗೆ ನೇರವಾಗಿ ಬೆಸೆಯಲು ಇರುವ ಸಾಧ್ಯತೆಗಳೆಂದರೆ ರೈಲು ಮತ್ತು ವಿಮಾನ. ಅದರಲ್ಲಿಯೂ ರೈಲ್ವೇ ಸಂಪರ್ಕದ ಮೂಲಕ ಸಂಪರ್ಕಿಸಲು ಕಾರ್ಯಾರಂಭವಾಗಿದೆ. ಇತ್ತ ಈ ಹಿಂದಿನಿಂದಲೂ ಪವಿತ್ರ ತಾಣಗಳಾದ ಪ್ರಯಾಗ, ಕಾಶಿ, ಅಯೋದ್ಯೆ , ಹರಿದ್ವಾರ ಸೇರಿದಂತೆ ಎಲ್ಲಾ ತಾಣಗಳಿಗೂ ಕುಂದಾಪುರ ಮೂಲಕ ರೈಲು ಆರಂಭಿಸಿ ಎನ್ನುವ ಕುಂದಾಪುರ ರೈಲ್ವೇ ಸಮಿತಿಯ ಹೋರಾಟ ನಡೆಯುತ್ತಿದೆ.
ಇದೀಗ ಶ್ರೀ ರಾಮ ಮಂದಿರ ಲೋಕಾರ್ಪಣೆಯಾಗುವ ಹೊತ್ತಲ್ಲೇ ಮಂಗಳೂರು ಉಡುಪಿ ಕುಂದಾಪುರ ಮೂಲಕ ನೇರ ರೈಲು ಸೇವೆ ಆರಂಭಿಸಿ ಎಂದು ಕುಂದಾಪುರ ರೈಲ್ವೇ ಸಮಿತಿಯು ಕೊಂಕಣ ರೈಲ್ವೇ, ಉಡುಪಿ ಸಂಸದರು ಹಾಗು ರೈಲ್ವೇ ಸಚಿವರಿಗೆ ಮನವಿ ನೀಡಿದೆ. ಮಂಗಳೂರು ರೈಲು ನಿಲ್ದಾಣ ಮೇಲ್ದರ್ಜೆಗೆ ಏರುತಿದ್ದು ಹೊಸ ರೈಲುಗಳನ್ನು ಆರಂಭಿಸಲು ಸರ್ವ ಸನ್ನದ್ದವಾಗಿದೆ. ಕೊಂಕಣ ರೈಲ್ವೆ ಇದುವರೆಗೂ ಹೊಸ ರೈಲು ಆರಂಭಿಸಿ ಎನ್ನುವ ಮನವಿ ಈಡೇರಿಸದೇ ಇರಲು ಪ್ಲಾಟ್ ಪಾರಂ ಸಮಸ್ಯೆ ಹೇಳುತಿದ್ದು ಈ ಸಮಸ್ಯೆ ಈಗ ಪರಿಹಾರಗೊಂಡಿದೆ. ಹೀಗಾಗಿ ರೈಲು ಆರಂಭಿಸಿ ಭಾರತೀಯರ ಭಾವನೆಗಳನ್ನು ಗೌರವಿಸುವಂತೆ ಸಮಿತಿ ಕೋರಿದೆ. ಒಂದೊಮ್ಮೆ ಅಯೊದ್ಯೆ ಮಂಗಳೂರು ರೈಲು ಆರಂಭವಾದರೆ ಹಿಂದೂಗಳ ಪವಿತ್ರ ಸ್ಥಳಗಳಾದ ಕಾಶಿ, ಪ್ರಯಾಗ್ ಕೂಡಾ ಕುಂದಾಪುರದ ಜತೆ ಸಂಪರ್ಕಿಸಲ್ಪಡುತ್ತದೆ ಎಂದು ಗಣೇಶ್ ಪುತ್ರನ್ ಮನವಿ ಮಾಡಿದ್ದಾರೆ.











