ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಮಾಜ ಮುಂದೆ ಬರಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಅಂತಹಾ ಮಕ್ಕಳ ಶಿಕ್ಷಣ ಸೇವೆಯನ್ನು ಡಾ. ಹೆಚ್.ಎಸ್. ಶೆಟ್ಟಿಯವರು ನೀಡುತ್ತಿದ್ದಾರೆ. ಸಮಾಜದ ಅತ್ಯಂತ ಬಡವರ, ನೊಂದವರ ಕಣ್ಣೊರೆಸಿದಾಗ ಅದು ದೇವರನ್ನು ತಲುಪುತ್ತದೆ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ 23ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ “ಡಾಕ್ಟರ್ ಆಫ್ ಸೈಯನ್ಸ್” ಗೌರವಕ್ಕೆ ಭಾಜನರಾದ ಹಾಲಾಡಿ ಕುದ್ರುಮನೆ ಡಾ. ಶ್ರೀನಿವಾಸ ಶೆಟ್ಟಿಯವರಿಗೆ ಹಾಲಾಡಿ ಶ್ರೀ ಆದಿಮರಳುಚಿಕ್ಕು ದೈವಸ್ಥಾನದ ಆಡಳಿತ ಮಂಡಳಿ, ಭಕ್ತಾದಿಗಳು, ಹಾಲಾಡಿ ಕುದ್ರುಮನೆ, ಹಾಲಾಡಿ ಕೈಕಾಡಿಮನೆ ಮತ್ತು ಉಳ್ತೂರು ಭಂಡಾರರಮನೆ ಕುಟುಂಬಿಕರಿಂದ ಭಾನುವಾರ ಹಾಲಾಡಿ ಶ್ರೀ ಆದಿಮರಳು ಚಿಕ್ಕು ದೈವಸ್ಥಾನದ ವಠಾರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಡಾ. ಹೆಚ್.ಎಸ್.ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಹೆಚ್.ಎಸ್.ಶೆಟ್ಟಿ, ಪ್ರತಿಯೊಬ್ಬ ವ್ಯಕ್ತಿಗೂ ಒಬ್ಬ ದೊಡ್ಡ ತಂದೆ ಇರಬೇಕು ಅಥವಾ ಒಳ್ಳೆಯ ಗಾಡ್ ಫಾದರ್ ಇರಬೇಕು. ಹಾಗಾಗಿ ನಾವೆಲ್ಲರೂ ಉತ್ತಮ ತಂದೆ, ತಾಯಿಯಾಗಲು ಮತ್ತು ಗಾಡ್ ಫಾದರ್ ಆಗಲು ಯತ್ನಿಸಿದಾಗ ಸಮರ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಶ್ರೀ ಶಕ್ತಿ ದರ್ಶನ ಯೋಗಾಶ್ರಮದ ದೇವ ಬಾಬಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಲಾಡಿ ಕುದ್ರುಮನೆ ಡಾ. ಶ್ರೀನಿವಾಸ ಶೆಟ್ಟಿಯವರ ಅಭಿನಂದನಾ ಸಮಿತಿ ಅಧ್ಯಕ್ಷ ರಾಘವ ಶೆಟ್ಟಿ, ಹಾಲಾಡಿ ಕುದ್ರುಮನೆ ಅಧ್ಯಕ್ಷತೆ ವಹಿಸಿದ್ದರು.
ಹಾಲಾಡಿ ಕುದ್ರುಮನೆ ಗೋಪಾಲ ಶೆಟ್ಟಿ, ಉಳ್ತೂರು ಭಂಡಾರರಮನೆ ದೇವೇಂದ್ರ ಶೆಟ್ಟಿ, ಹಾಲಾಡಿ ಕಾಡಿಮನೆ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು. ಉದಯಕುಮಾರ್ ಶೆಟ್ಟಿ ಸ್ವಾಗತಿಸಿದರು. ಉದಯಕುಮಾರ್ ಶೆಟ್ಟಿ ಕುದ್ರುಮನೆ ಪ್ರಶಸ್ತಿ ಪತ್ರ ವಾಚಿಸಿದರು. ನಿವೃತ್ತ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಶೆಟ್ಟಿ ಪ್ರಾಸ್ತಾವಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು. ಹಾಲಾಡಿ ಕುದ್ರುಮನೆ ಡಾ. ಅರುಣ್ ಕುಮಾರ್ ಶೆಟ್ಟಿ ವಂದಿಸಿದರು.
ಬಳಿಕ ಶಕ್ತಿದರ್ಶನ ಯೋಗಾಶ್ರಮ (ರಿ.) ಕಿನ್ನಿಗೋಳಿ ಇವರಿಂದ “ವಿಶ್ವಮಾತಾ ಗೋಮಾತಾ” ದ್ವಿಭಾಷಾ ನೃತ್ಯ ನಾಟಕ ಪ್ರದರ್ಶನಗೊಂಡಿತು.











