ಕಜ್ಕೆಯಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ಲೋಕಾರ್ಪಣೆಯ ಧಾರ್ಮಿಕ ಸಭಾ ಕಾರ್ಯಕ್ರಮ

ಕುಂದಾಪುರ ಮಿರರ್ ಸುದ್ದಿ…
ಕಜ್ಕೆ :ಪುಣ್ಯಕ್ಷೇತ್ರಗಳಿಗೆ ಪಾದಸ್ಪರ್ಶ ಮಾಡಿದಾಗ ಪಾಪಕರ್ಮಗಳು ದೂರಾಗುತ್ತವೆ. ಪುಣ್ಯಸಂಪಾದನೆ ಜಗತ್ತಿನಲ್ಲಿಯೇ ಅತೀದೊಡ್ಡ ಸಂಪತ್ತು. ನಾವು ಪುಣ್ಯ ಸಂಪಾದನೆ ಮಾಡಬೇಕು. ದೇವರಿಗಿಂತ ಭಕ್ತರು ದೊಡ್ಡವರು. ಭಕ್ತರಿಗಿಂತ ಭಕ್ತಿ ದೊಡ್ಡದು. ಪ್ರತಿಯೊಬ್ಬ ಭಕ್ತರ ಹೃಧಯದಲ್ಲಿಯೂ ಭಕ್ತಿಯ ತಂಗಾಳಿ ಬೀಸಬೇಕು ಎಂದು ಹೇಳಿದ ಅವರು ಶಿವಸುಜ್ಞಾನ ತೀರ್ಥ ಶ್ರೀಗಳ ಸಂಕಲ್ಪ ಶಕ್ತಿ ಅದ್ಭುತವಾದುದು. ಅವರ ಭಕ್ತಿ ಸಂಕಲ್ಪದಿಂದ ಕಜ್ಕೆ ಎನ್ನುವುದು ಪುಣ್ಯ ಕ್ಷೇತ್ರವಾಗಿ ನಿರ್ಮಾಣವಾಗಿದೆ. ಸಾಕ್ಷತ್ ಹೊರನಾಡಿಗೆ ಹೋದ ಅನುಭವವೇ ಇಲ್ಲಿ ಆಗುತ್ತಿದೆ. ಮತ್ತೆ ಮತ್ತೆ ಕಜ್ಕೆ ಅನ್ನಪೂರ್ಣೇಶ್ವರಿಯ ದರ್ಶನಕ್ಕೆ ಬರುವ ಮನಸ್ಸಾಗುತ್ತಿದೆ ಎಂದು ಬೀದರ್ ಶಹಪುರದ ಶ್ರೀ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಹೇಳಿದರು.
ಕಜ್ಕೆಯಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ಲೋಕಾರ್ಪಣೆಯ ಅಂಗವಾಗಿ ಫೆ.21ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಯವರು ಅನ್ನಪೂರ್ಣೇಶ್ವರಿಯನ್ನು ಶ್ರದ್ಧಾಂತಃಕರಣ ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಆಯುರಾರೋಗ್ಯ ಐಶ್ವರ್ಯ, ಮೋಕ್ಷದ ಮಾರ್ಗವೂ ಲಭಿಸುತ್ತದೆ. ಅಂಥಹ ಶಕ್ತಿ ಈ ಸಾನಿಧ್ಯಕ್ಕಿದೆ. ಇರುವೆಯೊಂದು ತನಗಿಂತ 30 ಪಟ್ಟು ಭಾರದ ವಸ್ತುವನ್ನು ಹೊತ್ತೊಯ್ಯುವಂತೆ ಇಲ್ಲಿ ಭಕ್ತರ ಮೂಲಕ ಆಶ್ಚರ್ಯಕರ ರೀತಿಯಲ್ಲಿ ದೇವಿ ಸೇವೆ ಮಾಡಿಸಿಕೊಂಡಿದ್ದಾಳೆ. ಎಲ್ಲವೂ ಅನ್ನಪೂರ್ಣೇಶ್ವರಿ, ಆಧಿಶಂಕರಚಾರ್ಯಾರ ಪೂರ್ಣಾನುಗ್ರಹವೇ ಕಾರಣ ಎಂದರು
ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ವಿಠಲದಾಸ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ, ದೇವಸ್ಥಾನಗಳು ಆಧ್ಯಾತ್ಮಿಕ ದೀಪಸ್ತಂಭಗಳಿದ್ದಂತೆ. ಭವಸಾಗರದಲ್ಲಿ ಮುಳುಗಿರುವರಿಗೆ ರಕ್ಷೆ ನೀಡುವುದು ದೇವಸ್ಥಾನಗಳು. ಅಪ್ರತಿಮವಾದ ಭಗವಂತನ ನೋಡಲು ಪ್ರತಿಮೆಯೇ ಮಾಧ್ಯಮ. ಹಾಗಾಗಿ ಪ್ರತಿಮೆಗಳ ಮೂಲಕ ಭಗವಂತನ ಆರಾಧನೆ ಮಾಡುತ್ತೇವೆ. ಧನಾತ್ಮಕವಾದ ಶಕ್ತಿಯನ್ನು ದೇವಸ್ಥಾನಗಳು ನೀಡುತ್ತವೆ. ಮಠ ಮಂದಿರಗಳು ಭಕ್ತಿ, ಜ್ಞಾನದ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕೆ ಹೊರತು ವ್ಯಾಪಾರಿ ಕೇಂದ್ರಗಳಾಗಬಾರದು. ಹಿಂದೂ ಸಮಾಜಕ್ಕೆ ಪ್ರೇರಣೆ ನೀಡುವ ಕೇಂದ್ರಗಳು ಮಠ ಮಂದಿರಗಳಾಗಬೇಕು ಎಂದರು.
ಸಾವಿತ್ರಿ ಪೀಠ, ವಡ್ನಾಳ್ ಮಹಾಸಂಸ್ಥಾನ ಮಠದ ಶ್ರೀ ಶಂಕರಾತ್ಮನಂದ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಕಜ್ಕೆ ಜ್ಞಾನ, ಭಕ್ತಿ, ಆದ್ಯಾತ್ಮಿಕತೆ ಕೇಂದ್ರ ಎನ್ನುವುದನ್ನು ನಿಸ್ಸಂದೇಹವಾಗಿ ಹೇಳಬಹುದು. ಕರಾವಳಿ ಭಾಗದಲ್ಲಿ ಶಕ್ತಿಯನ್ನು ಭಗವತಿಯ ರೂಪದಲ್ಲಿ ಆರಾಧಿಸುತ್ತಾರೆ. ಇಲ್ಲಿ ಅನ್ನಪೂರ್ಣೇಶ್ವರಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾಳೆ ಎಂದರು.
ಬೆಂಗಳೂರು ದಕ್ಷಿಣ ಜಗದ್ಗುರು ಪೀಠದ ಶಿವಾನಂದಭಾರತಿ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳು ಜ್ಞಾನ ಪ್ರಸರಣ ಕೇಂದ್ರಗಳಾಗಬೇಕು. ಭಕ್ತಿಯ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಲು ದೇವಸ್ಥಾನಗಳು ಪೂರಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜ್ಯೋತಿವೀದ್ವಾನ್ ಮತ್ತು ಜ್ಯೋತಿಷಿ ಕೆ.ಪಿ ಕುಮಾರಗುತ್ತು ತಂತ್ರಿಯವರು, ಕಾಂಗ್ರೆಸ್ ಮುಖಂಡರಾದ ಪ್ರಸಾದ ರಾಜ್ ಕಾಂಚನ್, ಎಸ್.ಕೆಎಫ್ ಎಲಿಗ್ಸೆರ್ ಆಡಳಿತ ನಿರ್ದೇಶಕ ಡಾ.ರಾಮಕೃಷ್ಣ ಆಚಾರ್, ಉದ್ಯಮಿ ವಿಠಲ್ ಬೆಳಂದೂರು,ಕಾಳಿಕಾಂಬಾ ದೇವಸ್ಥಾನ ಬಾರಕೂರು ಇದರ 2ನೇ ಮೊಕ್ತೇಸರ ಪ್ರವೀಣ ಆಚಾರ್ಯ, ಕಾಳಿಕಾಂಬಾ ದೇವಸ್ಥಾನ ಕಾರ್ಕಳ ಇದರ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಹೋಟೆಲ್ ಉದ್ಯಮಿ ಬಾಲಕೃಷ್ಣ ಶೆಟ್ಟಿ ಬೆಳಗಾಂ, ವಸಂತ ಮುರಳಿ ಆಚಾರ್ಯ, ಡಾ.ಉಮೇಶ ಆಚಾರ್ಯ, ಅರೇಮಾದನಹಳ್ಳಿ ಶಾಖಾ ಮಠದ ಕಾರ್ಯಧ್ಯಕ್ಷ ಎಚ್ ರಾಜೇಶ್ ಆಚಾರ್ಯ ಮಠದಬೆಟ್ಟು,ಎಚ್.ಬಿ ಕುಮಾರ ಆಚಾರ್ಯ ಹಾಸನ, ಸಾಗರ ಕಾಳಿಕಾಂಬಾ ದೇವಸ್ಥಾನದ ರಮೇಶ, ಶಿವಮೊಗ್ಗ ಕಾಳಿಕಾರಮೇಶ್ವರಿ ದೇವಸ್ಥಾನದ ಸರ್ವೇಶ್ವರ ಆಚಾರ್ಯ, ಶಶಿಕಲಾ ಪ್ರಭಾಕರ ಆಚಾರ್ಯ ಅಲೆಯೂರು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಥಳದಾನಿಗಳಾದ ಕೃಷ್ಣಯ್ಯ ಶೆಟ್ಟಿ, ಶ್ರೀಧರ ಕಾಮತ್ ಅವರನ್ನು ಸನ್ಮಾನಿಸಲಾಯಿತು. ರಸ್ತೆಗೆ ಸ್ಥಳ ನೀಡಿದ ಕರಿಯ ನಾಯ್ಕ ಹಾಗೂ ವಾಸ್ತು ಶಿಲ್ಪಿ, ಶಿಲಾ ಶಿಲ್ಪಿ, ಕಾಷ್ಠ ಶಿಲ್ಪಿಗಳನ್ನು ಗೌರವಿಸಲಾಯಿತು. ಟಿ.ಜಿ ಆಚಾರ್ಯ ಹೆಬ್ರಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಕಾಶ ಆಚಾರ್ಯ ಕುಕ್ಕೆಹಳ್ಳಿ ಮತ್ತು ರಾಜೇಶ ಕುತ್ಯಾರು ಕಾರ್ಯಕ್ರಮ ನಿರ್ವಹಿಸಿದರು. ಉದಯ ಆಚಾರ್ಯ ಗೋಳಿಯಂಗಡಿ ವಂದಿಸಿದರು.
ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಶ್ರೀಗಳ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ವಿಶ್ವನಾಥ ಪುರೋಹಿತರ ನೇತೃತ್ವದಲ್ಲಿ ಅನ್ನಪೂರ್ಣೇಶ್ವರಿ, ಗಣಪತಿ ದೇವರು ಹಾಗು ಆದಿಶಂಕರಾಚಾರ್ಯರ ಶಿಲಾಬಿಂಬ ಪ್ರತಿಷ್ಠೆ ಮತ್ತು ಮಹಾಕುಂಭಾಭಿಷೇಕ ನಡೆಯಿತು.











