ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವಂಡ್ಸೆಯ ಶ್ರೀ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ವಂಡ್ಸೆ ದಿ|ನಾರಾಯಣ ಗಾಣಿಗರ ಸ್ಮರಣಾರ್ಥ ನಾರಾಯಣ ಗಾಣಿಗರ ಕುಟುಂಬದವರು ಕೊಡಮಾಡುವ ವಂಡ್ಸೆ ನಾರಾಯಣ ಗಾಣಿಗ ಪ್ರಶಸ್ತಿ-2024ಕ್ಕೆ ಬಡಗುತಿಟ್ಟಿನ ಯಕ್ಷಗಾನ ಸಾಂಪ್ರದಾಯಿಕ ಶೈಲಿಯ ಭಾಗವತ, ಯಕ್ಷಗುರು, ಮದ್ದಳೆವಾದಕರಾದ ವಿಶ್ವೇಶ್ವರ ಸೋಮಯಾಜಿ ಮೋರ್ಟು ಇವರನ್ನು ಆಯ್ಕೆ ಮಾಡಲಾಗಿದೆ.
ಮೋರ್ಟು ಶಿವರಾಮ ಸೋಮಯಾಜಿ ಮತ್ತು ಮೀನಾಕ್ಷಿ ದಂಪತಿಗಳ ಪುತ್ರರಾಗಿ 1950ರಲ್ಲಿ ಜನಿಸಿದ ಇವರು ಯಕ್ಷಗಾನದ ಬಗ್ಗೆ ಆಕರ್ಷಿತರಾಗಿ ಬೆಳ್ಳಾಲದ ವೆಂಕಟಾಚಲ ಹೆಬ್ಬಾರ್ ಅವರ ಬಳಿ ತಾಳ ಅಭ್ಯಾಸ ಮಾಡಿದರು. ಕದಳಿಯ ಸೀತಾರಾಮ ಮಧ್ಯಸ್ಥ, ಜನ್ಸಾಲೆ ನಾಗಪ್ಪಯ್ಯವರ ಗರಡಿಯಲ್ಲಿ ಮದ್ದಳೆಯ ನುಡಿತಗಳನ್ನು ಸಾಂಪ್ರದಾಯಕವಾಗಿ ಅಭ್ಯಾಸಿಸಿ ಬಳಿಕ ಮಾರ್ವಿ ವಾದಿರಾಜ ಹೆಬ್ಬಾರ್ ಅವರಲ್ಲಿ ಭಾಗವತಿಕೆಯನ್ನು ಕರಗತ ಮಾಡಿಕೊಂಡರು. 1976ರಲ್ಲಿ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಬಳಿ ಭಾಗವತಿಕೆಯ ರಂಗತಂತ್ರದ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡರು. ಕಮಲಶಿಲೆ, ಮಾರಣಕಟ್ಟೆ, ಮಂದಾರ್ತಿ, ಕೊಡವೂರು, ಪೆರ್ಡೂರು, ಶಿವರಾಜಪುರ, ಸೌಕೂರು ಮೇಳಗಳಲ್ಲಿ 28 ವರ್ಷಗಳ ಕಲಾಸೇವೆ ಸಲ್ಲಿಸಿದರು. ಬಡಗಿನ ಮೇರು ಭಾಗವತರಾಗಿದ್ದ ಮರವಂತೆ ನರಸಿಂಹ ದಾಸ, ಶ್ರೀನಿವಾಸ ಹಾಗೂ ಅಂಪಾರು ವೈದ್ಯರಿಗೆ ಮದ್ದಲೆಯಲ್ಲಿ ಸಾಥ್ ನೀಡಿ ಸೈ ಎನಿಸಿಕೊಂಡರು. ಶ್ರೀ ಕಮಲಶಿಲೆ ಕ್ಷೇತ್ರ ಮಹಾತ್ಮೆ ಹಾಗೂ ರಾಜಾರತ್ನ ಸೇನ ಎಂಬ ಪ್ರಸಂಗಗಳನ್ನು ರಚಿಸಿದ್ದಾರೆ. ಇವರ ಕಲಾಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಯಕ್ಷಬಂಧು ಅಭಿನಂದನಾ ಗ್ರಂಥವನ್ನು ಸಲ್ಲಿಸಲಾಗಿದೆ.
ಮಾ.12ರಂದು ತಿರುಮಲ ಶ್ರೀ ಲಕ್ಷ್ಮೀವೆಂಕಟರಣ ದೇವಸ್ಥಾನ ಜಾತ್ರೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.











