ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ʼಒಂದು ಸಿನಿಮಾದಿಂದ ಎಷ್ಟೋ ಜನ ಕಲಾವಿದರ ಭವಿಷ್ಯ ನಿರ್ಧಾರವಾಗುತ್ತದೆ. ಕೇವಲ ನಟನೆ ಮಾತ್ರವಲ್ಲದೇ ಬ್ಯಾಕ್ ಸ್ಟೇಜ್ ಕಲಾವಿದರೂ ಸಿನೆಮಾ ನಂಬಿ ಬದುಕುತ್ತಿದ್ದಾರೆ ಎಂದು ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು.
ಅವರು ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಯುವ ಪ್ರತಿಭೆ ಸೂಚನ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಚಿತ್ರ ʼಗಾಡ್ ಪ್ರಾಮಿಸ್’ನ ಮುಹೂರ್ತದ ಕ್ಲ್ಯಾಪ್ ನೆರವೇರಿಸಿ ಮಾತನಾಡಿದರು.
ನಮ್ಮ ಕರಾವಳಿಯ ಕಲಾವಿದರಿಗೆ ಒಳ್ಳೆಯ ವೇದಿಕೆ ಸಿಗುತ್ತಿಲ್ಲ. ಒಂದು ಸಿನಿಮಾದಿಂದ ಎಷ್ಟೋ ಜನರ ಬದುಕು ಹಸನಾಗಲಿ. ಇದೇ ರೀತಿ ನೂರಾರು ಸಿನಿಮಾಗಳು ಆಗಲಿ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಹಾರೈಸಿದರು.
ಚಿತ್ರದ ನಿರ್ದೇಶಕ ಸೂಚನ್ ಶೆಟ್ಟಿ ಮಾತನಾಡಿ, ಗಾಡ್ ಪ್ರಾಮಿಸ್ʼ ಚಿತ್ರದ ಮುಹೂರ್ತ ನೆರವೇರಿದೆ. ಕಳೆದ ಆರೇಳು ತಿಂಗಳಿನಿಂದ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸ ಆರಂಭಗೊಂಡಿದೆ. 2015ರಿಂದ ರವಿ ಬಸ್ರೂರು ಜತೆ ಕೆಲಸ ಮಾಡುತ್ತಿದ್ದೇನೆ. ಈಗ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ. ಸಿನಿಮಾ ಕುಂದಾಪುರ ಸುತ್ತಮುತ್ತ ನಡೆಯುತ್ತಿದೆ. ಫ್ಯಾಮಿಲಿ ಡ್ರಾಮಾ ಕಥೆಯನ್ನು ಒಳಗೊಂಡಿದೆ. ಆಡಿಷನ್ ನಡೆಸಿದ್ದೇವೆ. ಯಾರು ಆಯ್ಕೆಯಾಗಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ಡೈರೆಕ್ಟರ್ ತಂಡದ ಜತೆಗೆ ʼಕಟಕʼ, ʼಗಿರ್ಮಿಟ್ʼ ಸಿನಿಮಾಗಳ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದೆ. ಹೀಗಾಗಿ ಆ ಅನುಭವದ ಇಟ್ಟುಕೊಂಡು ನಿರ್ದೇಶನಕ್ಕೆ ಇಳಿದಿದ್ದೇನೆ ಎಂದರು.
ಕ್ಯಾಮರಾಕ್ಕೆ ಚಾಲನೆ ನೀಡಿದ ನಟ ಪ್ರಮೋದ್ ಶೆಟ್ಟಿ ಮಾತನಾಡಿ, ʼʼಸೂಚನ್ ಯಾವುದೇ ಕೆಲಸ ಮಾಡಿದ್ರೂ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತಾರೆ. ನಟನೆ, ನಿರ್ದೇಶನ ಎರಡು ಒಟ್ಟಿಗೆ ಮಾಡುತ್ತಿರುವುದರಿಂದ ಎಲ್ಲರೂ ಒಟ್ಟಿಗೆ ಸೇರಿ ಮುಂದುವರಿಯಲಿ. ಒಂದೊಳ್ಳೆ ತಂಡವಾಗಿ ಹೊರ ಹೊಮ್ಮಲಿ. ನನ್ನ ಪ್ರಕಾರ ಈ ಸಿನಿಮಾ ತುಂಬಾ ಚೆನ್ನಾಗಿ ಬರಲಿದೆ ಎಂಬ ಭರವಸೆ ಇದೆ. ಸೂಚನ್ ಅದ್ಭುತ ನಟನೂ ಹೌದು ಎನ್ನುವುದನ್ನು ನಮ್ಮ ಸಿನಿಮಾದಲ್ಲಿ ಪ್ರೂವ್ ಮಾಡಿದ್ದಾನೆ ಎಂದು ಹೇಳಿದರು.
ನಿರ್ಮಾಪಕ ಮೈತ್ರಿ ಮಂಜುನಾಥ್ ಮಾತನಾಡಿ, ʼʼನಾವು ಈ ಹಿಂದೆ ʼಹಫ್ತಾʼ ಸಿನಿಮಾ ಮಾಡಿದ್ದೇವೆ. ಇದು ನನ್ನ ಎರಡನೇ ಸಿನಿಮಾ. ಗಾಡ್ ಪ್ರಾಮಿಸ್ ಸಿನಿಮಾದ ಸ್ಕ್ರೀಪ್ಟ್ ತುಂಬಾ ಚೆನ್ನಾಗಿದೆ. ಒಳ್ಳೆ ಅನುಭವ ತಂಡದೊಂದಿಗೆ ಕೈ ಜೋಡಿಸಿದೆʼʼ ಎಂದರು.
ಸೂಚನ್ ಶೆಟ್ಟಿ ನಿರ್ದೇಶನದ ʼಗಾಡ್ ಪ್ರಾಮಿಸ್ʼ ಸಿನಿಮಾ ಪಯಣಕ್ಕೆ ನಿರ್ಮಾಪಕ ಮೈತ್ರಿ ಮಂಜುನಾಥ್ ಬಲ ತುಂಬಿದ್ದಾರೆ. ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಸಿನಿಮಾಗೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಭರತ್ ಮಧುಸೂದನನ್ ಸಂಗೀತ ನಿರ್ದೇಶನ, ನವೀನ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ. ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ನಡೆಯಲಿದೆ.











