ಕುಂದಾಪುರ ಮಿರರ್ ಸುದ್ದಿ…
ಕೋಟ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿಕೇಂದ್ರ (ಸಿಡಾಕ್), ಧಾರವಾಡ, ಇವರ ಸಹಯೋಗದೊಂದಿಗೆ ಕೃಷಿ ಇಲಾಖೆ ಕುಂದಾಪುರ, ಉಡುಪಿ ಮತ್ತು ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿ, ಕೋಟ ಇವರ ಜಂಟಿ ಆಶ್ರಯದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲನಯನ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಹದಿನೈದು ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಗುರುವಾರ ಕೋಟದ ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿ ಇಲ್ಲಿ ಆರಂಭಗೊಂಡಿತು.
ಕಾರ್ಯಕ್ರಮವನ್ನು ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕ ಅರವಿಂದ.ಡಿ ಬಾಳೇರಿಯವರು ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರಲ್ಲದೆ ಸ್ವಉದ್ಯೋಗದ ಮೂಲಕ ನಿರೋದ್ಯೋಗಕ್ಕೆ ಮೂಲ ಪರಿಹಾರ ಎಂದು ಹೇಳುವ ಮೂಲಕ ಸಿಡಾಕ್ ಸಂಸ್ಥೆಯ ಕಾರ್ಯವೈಖರಿ, ಸಿಡಾಕ್ ಸಂಸ್ಥೆ ನಡೆಸುವ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿ ಉದ್ಯಮದಾರರು ಸದಾ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸುವುದು ಉತ್ತಮ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೋಟ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಪ್ರಭ ಸ್ವ ಉದ್ಯೋಗಾಕಾಂಕ್ಷಿಗಳಿಗೆ ಇರುವ ಉದ್ಯಮ ಅವಕಾಶಗಳ ಬಗ್ಗೆ ತಿಳಿಸಿದರು.
ಉಡುಪಿ ಜಲಾನಯನ ಸಂಯೋಜಕಿ ಉಷಾ ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲರಿಗೂ ಉದ್ಯೋಗ ನೀಡಲು ಸರ್ಕಾರಕ್ಕೆ ಅಸಾಧ್ಯದ ಮಾತಾಗಿದೆ. ಆದ್ದರಿಂದ ಸ್ವಂತ ಉದ್ಯೋಗವನ್ನು ಸ್ಥಾಪಿಸಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಜ್ಯೋತಿ ಪ್ರಶಾಂತ, ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿ, ಕೋಟ ಇದರ ಕೇಂದ್ರ ಮುಖ್ಯಸ್ಥರಾದ ಚೇತನ. ಎಂ,ಸಿಡಾಕ್ ಉಡುಪಿ ಕಛೇರಿಯ ತರಬೇತುದಾರ ಪೃಥ್ವಿರಾಜ್ ಎಂ ನಾಯಕ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿಡಾಕ್ ಉಡುಪಿ ಕಛೇರಿಯ ತರಬೇತುದಾರೆ ಶ್ರುತಿ ಸ್ವಾಗತಿಸಿ ನಿರೂಪಿಸಿದರು.











