ಕುಂದಾಪುರ ಮಿರರ್ ಸುದ್ದಿ…
ಕೋಟ: ಮಂಗಳೂರಿನ ಕರ್ನಾಟಕ ಯಕ್ಷಧಾಮ ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಕಲಾವಿದ ಕ್ಯಾದಗಿ ಮಹಾಬಲೇಶ್ವರ ಭಟ್ ಅವರು ಸಂಯೋಜಿಸಿದ ಏಕವ್ಯಕ್ತಿ ಯಕ್ಷಗಾನ ಪುಷ್ಪಕ ಯಾನ ಕಾರ್ಯಕ್ರಮ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ ವಠಾರದಲ್ಲಿ ನಡೆಯಿತು.
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್.ಕಾರಂತ ಕಾರ್ಯಕ್ರಮ ಉದ್ಘಾಟಿಸಿ ಒಬ್ಬ ವ್ಯಕ್ತಿ ರಂಗ ಭೂಮಿಯಲ್ಲಿ ತಾನು ಅಭಿನಯಿಸುವ ಒಂದು ಪಾತ್ರ ಸಂಪೂರ್ಣವಾಗಿ ಪ್ರೇಕ್ಷಕರ ಮನಸು ಸೂರೆಗೊಳ್ಳಬೇಕಾದರೆ ಆ ಪಾತ್ರದಲ್ಲಿ ಸಂಪೂರ್ಣ ಪಾದಾರ್ಪಣೆ ಮಾಡಬೇಕು. ತಲ್ಲೀನನಾಗಬೇಕು. ಆ ಪಾತ್ರವೇ ತಾನು ಎಂದು ಪರಕಾಯಪ್ರವೇಶ ಮಾಡಬೇಕು ಎಂಬ ಸಿದ್ದಾಂತ ಇದೆ.
ನನ್ನ ಅಧ್ಯಯನದಲ್ಲಿ ಹೇಳುವುದಾದರೆ ನಮ್ಮಲ್ಲಿ ಸ್ಪಂದನ ಶೀಲತೆ ಕಡಿಮೆಯಾಗುತ್ತಿದೆ. ವಿದ್ಯುನ್ಮಾನ ಅತಿ ಬಳಕೆಯಿಂದ ಮನುಷ್ಯನ ಬದುಕು ಯಂತ್ರದಂತಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಮೊಬೈಲಿನಲ್ಲಿರುವ ಆತ್ಮೀಯತೆ ಎದುರುಗಡೆ ಸಿಕ್ಕಾಗ ನಮ್ಮಲ್ಲಿ ಕಡಿಮೆಯಾಗುತ್ತದೆ. ಈ ಉದ್ದೇಶದಿಂದ ಈ ಕ್ಯಾದಿಗೆ ಅವರ ಏಕವ್ಯಕ್ತಿ ಯಕ್ಷಗಾನ ಪ್ರಸ್ತುತ ಎಂದು ಕಾರಂತರು ಹೇಳಿದರು.
ಈ ಸಂದರ್ಭ ಕ್ಯಾದಗಿ ಮಹಾಬಲೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎರಡು ವರ್ಷದಿಂದ ಜಗತ್ತಿನಲ್ಲಿ ಕೊರೊನಾ ಮಹಾಮಾರಿ ಬಂದು ಎಲ್ಲರೂ ನಲುಗಿ ಹೋಗಿದ್ದಾರೆ. ಇದರಿಂದಾಗಿ ಮನೋರಂಜನೆ ಯಾರಿಗೂ ಅನಿವಾರ್ಯವಲ್ಲ. ಆದರೆ ಮನರಂಜನೆ ಅನಿವಾರ್ಯವಾಗುವುದು ಇದನ್ನು ನಂಬಿ ಬದುಕುವ ಕಲಾವಿದರಿಗೆ ಮಾತ್ರ ಎಂದರು.
ನಾನು ಏಕ ವ್ಯಕ್ತಿ ಯಕ್ಷಗಾನ ಕಲ್ಪನೆ ಮಾಡಲು ಕಾರಣ ಕೊರೊನಾ ಸಂದರ್ಭದಲ್ಲಿ ಸರ್ಕಾರ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಇಂತಹ ಕೆಲವೊಂದು ನಿಯಮ ಜಾರಿಗೆ ತಂದಿದೆ.
ಇದರಿಂದಾಗಿ ಸಭೆಯಲ್ಲಿ ಅಂತರ ಕಾಪಾಡಬಹುದು. ಆದರೆ ವೇದಿಕೆಯಲ್ಲಿ ಅಂತರ ಕಾಪಾಡುವುದು ಕಷ್ಟ. ಅದಕ್ಕಾಗಿ ನಾನು ಏಕವ್ಯಕ್ತಿ ಅಭಿನಯ ಕಲ್ಪನೆಯನ್ನು ಮಾಡಿದೆ.
ಈ ಕಾರ್ಯಕ್ರಮದಿಂದಾಗಿ ಜನರಿಗೆ ಒಂದು ಮನೋರಂಜನೆ ಆಯಿತು. ಕಲಾವಿದರ ಹೊಟ್ಟೆ ಪಾಡಿಗೆ ಒಂದು ದುಡಿಮೆ ಆಯಿತು. ಸರ್ಕಾರದ ನಿಯಮವು ಉಳಿಯಿತು ಎಂದು ಹೇಳಿದರು.
ಮಕ್ಕಳ ಮೇಳದ ಸಂಚಾಲಕ ಶ್ರೀಧರ ಹಂದೆ, ಕಲಾ ಸಾಹಿತಿ ಮಂಗಳೂರು ಎಚ್.ಜನಾರ್ಧನ ಹಂದೆ ಉಪಸ್ಥಿತರಿದ್ದರು.
ಸಾಲಿಗ್ರಾಮ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ್ ಹೊಳ್ಳ ಸ್ವಾಗತಿಸಿದರು. ಉಪನ್ಯಾಸಕ ಹಾಗೂ ಕಲಾವಿದ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.











