ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಇಲ್ಲಿನ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಯು.ಬಿ ನಂದಕುಮಾರ್ ಪೊಲೀಸ್ ಇಲಾಖೆಯಲ್ಲಿ 31 ವರ್ಷಗಳ ಸುಧೀರ್ಘಕಾಲ ಸೇವೆ ಸಲ್ಲಿಸಿ ಜು.31ರಂದು ನಿವೃತ್ತಿ ಹೊಂದಿದ್ದು ಅವರ ಬೀಳ್ಕೊಡುಗೆ ಸಮಾರಂಭವು ಕುಂದಾಪುರದ ಮೊಗವೀರ ಸಭಾಭವನದಲ್ಲಿ ನಡೆಯಿತು.
ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಕುಂದಾಪುರ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ .ಕೆ .ಯು., ಪ್ರೊಬೆಷನರಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಕುಂದಾಪುರ ಉಪ ವಿಭಾಗದ ವಿವಿಧ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಅವರ ಸೇವೆಯನ್ನು ಶ್ಲಾಘಿಸಿದರು.
ಅವರು ಕುಂದಾಪುರ ಠಾಣೆಯಲ್ಲಿ ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಆ ಸಂದರ್ಭದಲ್ಲಿ ತುಂಬಾ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸುವಲ್ಲಿ ಮತ್ತು ನೂರಕ್ಕೂ ಹೆಚ್ಚು ಕಳೆದುಕೊಂಡ ಮೊಬೈಲನ್ನು ಪತ್ತೆ ಹಚ್ಚಿ ವಾರಿಸುದಾರರಿಗೆ ಹಿಂದಿರುಗಿಸಿರುವುದು ಶ್ಲಾಘನೀಯ.
1993ನೇ ಇಸವಿಯಲ್ಲಿ ಪೊಲೀಸ್ ಇಲಾಖೆಗೆ ಸೇರಿ ಗುಪ್ತಚರ, ಕರಾವಳಿ ಕಾವಲು ಪಡೆ ಹಾಗೂ ಮುಂತಾದ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದು ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳ ಪದಕವನ್ನು ನೀಡಿರುತ್ತಾರೆ.
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪರವರು ವಹಿಸಿ, ನಂದಕುಮಾರ್ ದಂಪತಿಗಳನ್ನು ಸನ್ಮಾನಿಸಿದರು.
ಕುಂದಾಪುರ ಎಎಸ್ಐ ಆನಂದ್ ಸ್ವಾಗತಿಸಿದರು. ಮಧುಸೂದನ್ ಕಾರ್ಯಕ್ರಮ ನಿರೂಪಿಸಿ, ಕುಂದಾಪುರ ನಗರ ಠಾಣೆಯ ಪಿಎಸ್ಐ ಪುಷ್ಪ್ ವಂದಿಸಿದರು.











