ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ನಾವು ಆಯುರ್ವೇದ, ಯೋಗ, ಪ್ರಾಣಾಯಾಮದಂತಹ ಉತ್ತಮ ಪರಂಪರೆಯನ್ನು ಹೊಂದಿದ್ದೇವೆ. ಇದನ್ನು ವಿದೇಶಿಗರು ಅರಿತುಕೊಂಡು, ಅನುಸರಿಸುತ್ತಿದ್ದಾರೆ. ವಿಪರ್‍ಯಾಸವೆಂದರೆ ನಾವು ಇದನ್ನು ಅನುಸರಿಸದೇ, ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಇದರಿಂದಲೇ ಮಾನಸಿಕ ಒತ್ತಡ ಹೆಚ್ಚಳ, ಕಾಯಿಲೆಗಳು ಹೆಚ್ಚಾಗುತ್ತಿದೆ. ಬದಲಾದ ನಮ್ಮ ಜೀವನ ಪದ್ಧತಿ ನಮ್ಮನ್ನು ವಿನಾಶದ ಅಂಚಿಗೆ ಕರೆದುಕೊಂಡು ಹೋಗುತ್ತಿದೆ ಎಂದು ಆಯುರ್ವೇದ ವೈದ್ಯ, ಹೂಡೆಯ ಬೀಚ್ ಹೀಲಿಂಗ್ ಹೋಮ್‌ನ ನಿರ್ದೇಶಕ ಡಾ| ಮೊಹಮ್ಮದ್ ರಫೀಕ್ ಹೇಳಿದರು.
ಅವರು ರವಿವಾರ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ ಪಾರಂಪರಿಕ ಆಹಾರ ಪದ್ಧತಿಯ ಕುರಿತಂತೆ ಅರಿವು ಮೂಡಿಸುವ 1೦ ನೇ ವರ್ಷದ ‘ಸಸ್ಯಾಮೃತ’ ಅನ್ನುವ ವಿಶಿಷ್ಟ ಕಾರ್‍ಯಕ್ರಮದಲ್ಲಿ ಮಾತಾನಾಡಿದರು.
ಪ್ರತಿ 7೦ ರಲ್ಲಿ ಒಬ್ಬರಿಗೆ ಕ್ಯಾನ್ಸರ್ ಇದೆ. ಪ್ರಪಂಚದಲ್ಲಿಯೇ ಅತೀ ಹೆಚ್ಚು ಹೃದಯಾಘಾತ ಸಂಭವಿಸುತ್ತಿರುವ ದೇಶ ಭಾರತ. ೧೦-೧೨ ವರ್ಷದವರೆಗೆ ಸಹ ಹೃದಯಘಾತ ಆಗುತ್ತಿದೆ. ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಂದಾಗಿ ದೇಶದ ಬಹುಪಾಲು ಹಣ ಆರೋಗ್ಯಕ್ಕಾಗಿಯೇ ವಿನಿಯೋಗ ಆಗುತ್ತಿದೆ. ನಾವು ಬಳಸುವ ಪ್ರತಿಯೊಂದು ಆಹಾರಗಳಲ್ಲಿಯೂ ರಾಸಾಯನಿಕ ಸೇರಿದ್ದು, ೯೧ ರಲ್ಲಿ ಕ್ಯಾರೆಟ್‌ನಲ್ಲಿ ಕೇವಲ ೦.೦೧ ರಷ್ಟಿದ್ದ ರಾಸಾಯನಿಕವಿಂದು ಶೇ. ೧೮ ರಷ್ಟಿದೆ. ಹಣ ಕೊಟ್ಟು ನಾವೇ ಕಾಯಿಲೆ ಖರೀದಿ ಮಾಡುತ್ತಿದ್ದೇವೆ. ಮನೆಯ ತರಕಾರಿ, ಮನೆಯ ಆಹಾರ ಹೆಚ್ಚೆಚ್ಚು ಸೇವಿಸಿ ಎಂದರು.
ಆಲೂರು ಚಿತ್ರಕೂಟ ಆಯುರ್ವೇದ ಹಾಸ್ಪಿಟಲ್‌ನ ಡಾ. ನೀಲಾ ಎಸ್. ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿದರು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕ ಸುಭಾಶ್ಚಂದ್ರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದ, ಸಿಬಂದಿ ಉಪಸ್ಥಿತರಿದ್ದರು.
ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕಿ ಅನುಪಮ ಎಸ್. ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕಿಯರಾದ ವಿಶಾಲ ನಿರೂಪಿಸಿ, ಶಾಂತಾ ಪರಿಚಯಿಸಿದರು.
ಹಿಂದಿನ ಕಾಲದಂತೆ ಆಷಾಢ ಮಾಸದಲ್ಲಿ ಆರೋಗ್ಯ ದೃಷ್ಟಿಯಿಂದ ಪಾರಂಪರಿಕ ಆಹಾರ ಪದ್ಧತಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವಂತಹ ಔಷಧಿಯ ಗುಣವುಳ್ಳ ಸಸ್ಯ ಪದಾರ್ಥಗಳಿಂದಲೇ ತಯಾರಿಸಿದ ೨೯ ಬಗೆಯ ಖಾದ್ಯಗಳನ್ನು ಬಸ್ರೂರಿನ ಬಾಣಸಿಗ ಮಹಾಬಲ ಹರಿಕಾರ್ ನೇತೃತ್ವದ ತಂಡ ತಯಾರಿಸಿ, ಬಂದವರಿಗೆ ಉಣಬಡಿಸಿದರು. ಮುರಿಯ ಕಷಾಯ, ಜಾಯಿಕಾಯಿ ಉಪ್ಪಿನಕಾಯಿ, ಕೆಸುವಿನ ಸೊಪ್ಪಿನ ಚಟ್ನಿ, ಸಂದು ಬಳ್ಳಿ ಚಟ್ನಿ, ಮಾತಂಗಿ ಸೊಪ್ಪಿನ ಚಟ್ನಿ, ಬಾಳೆದಿಂಡಿನ ಪಚ್ಚಡಿ, ಕಣಿಲೆ ಪಲ್ಯ, ಗಜಗಂಡ ಪಲ್ಯ, ಪತ್ರೋಡೆ ಪಲ್ಯ, ಚೂರು ಮೆಣಸಿನ ಸಾಸುವೆ, ಪತ್ರೋಡೆ ಗಾಲಿ, ಮಡಿವಾಳ ಸೊಪ್ಪಿನ ಇಡ್ಲಿ, ಪಾಂಡವ ಹರಿವೆ ಸೊಪ್ಪಿನ ಸಾಂಬಾರ್, ಕರಿ ಕೆಸುವಿನ ಮೇಲೊಗರ, ಉರಗ ತಂಬಳಿ, ಬೂದು ನೇರಳೆ ತಂಬುಳಿ, ಬಿಲ್ವಪತ್ರೆ ತಂಬಳಿ, ಚಗಟೆ ಸೊಪ್ಪಿನ ಬೋಂಡ, ಉಂಡಲಕಾಯಿ, ಹಲಸಿನ ಹಣ್ಣಿನ ಹೋಳಿಗೆ, ಬಾಳೆ ಎಲೆ ಹಲ್ವಾ, ಗೆಣಸಲೆ, ಸಾಮೆ ಅಕ್ಕಿ ಪಾಯಸ, ಅನ್ನ, ಮಜ್ಜಿಗೆ ಹುಲ್ಲಿನ ಮಜ್ಜಿಗೆ ಸಹಿತ ತರಹೇವಾರಿ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.