ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ‘ಬ್ರಿಟಿಷರ ಕರಾಳ ದಾಸ್ಯದಿಂದ ಮುಕ್ತರಾಗಿ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಫಲವಾಗಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಒಂದು ದೇಶವಾಗಿ ನೋಡಿದಾಗ ಅದು ಸಾಗುತ್ತಿರುವ ಹಾದಿ ನೆಮ್ಮದಿಯನ್ನು ಕೊಡುತ್ತದೆ. ಸ್ವಾತಂತ್ರದ ನಂತರ ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ, ಶಿಕ್ಷಣ ಇನ್ನುಳಿದ ಕ್ಷೇತ್ರಗಳಲ್ಲಿ ಭಾರತ ಜಗತ್ತಿಗೆ ಸ್ಪರ್ಧಿಸಿ ಉಳಿದ ದೇಶಗಳಿಗೆ ಮಾದರಿಯಾಗಿದೆ. ಎಂದು ರಮೇಶ್ ಕಾರ್ಣಿಕ್ ಹೇಳಿದರು.
ಅವರು ಯಡಾಡಿ- ಮತ್ಯಾಡಿ ವಿದ್ಯಾರಣ್ಯ (ಲಿಟ್ಲ್ ಸ್ಟಾರ್) ಆಂಗ್ಲ ಮಾಧ್ಯಮ ಶಾಲೆ ಮತ್ತು ಕುಂದಾಪುರ ಸುಜ್ಞಾನ ಎಜುಕೇಶನ್ ಟ್ರಸ್ಟ್ ಇವರ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಮಾತನಾಡಿದರು. ಬಡವರ ಏಳಿಗೆ ಮತ್ತು ಇನ್ನುಳಿದ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಿ, ತ್ಯಾಗ ಮನೋಭಾವನೆ ಆದರ್ಶಕತೆ, ಪ್ರೀತಿ -ನಂಬಿಕೆ, ಪ್ರಾಮಾಣಿಕತೆ ಇವೆಲ್ಲವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಕನಸು ನನಸಾಗಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಅವರು ‘ವಂದೇ ಮಾತರಂ’ ‘ಜೈಹಿಂದ್’ ‘ಭಾರತ್ ಮಾತಾ ಕಿ ಜೈ’ ಎಂಬ ಮೂರು ಘೋಷಣೆಯನ್ನು ಹೇಳುವುದರ ಮೂಲಕ ಸ್ವಾತಂತ್ರ್ಯ ಹೋರಾಟದ ಸಂಗ್ರಾಮದಲ್ಲಿ ಹೋರಾಟಗಾರರನ್ನು ಸ್ಮರಿಸಿಕೊಂಡು ಗೌರವಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ಏರ್ ಮಾರ್ಷಲ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಆರಂಭದಲ್ಲಿ ಭವ್ಯ ಮೆರವಣಿಗೆಯ ಮುಖಾಂತರ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಅಂಬೇಡ್ಕರ್ ಮತ್ತು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಲಾಯಿತು. ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ, ಮುಖ್ಯ ಶಿಕ್ಷಕ ಪ್ರದೀಪ್.ಕೆ , ಉದ್ಯಮಿ ಅನಿಲ್ ಕುಮಾರ್ ಶೆಟ್ಟಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಪ್ರೀತಿ ಸ್ವಾಗತಿಸಿ ವಂದಿಸಿದರು. ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರು ತಂಡದವರಿಂದ ದೇಶಭಕ್ತಿ ಕಾರ್ಯಕ್ರಮ ನಡೆಯಿತು.











