ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಕಾರ್ಯಕ್ರಮ
ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ: ಈ ಸಮಾಜದ ಪರಿವರ್ತನೆಯ ಹರಿಕಾರರಾಗಿರುವ ನಾರಾಯಣಗುರುಗಳು ಹಾಕಿಕೊಟ್ಟ ದಾರಿ ನಮಗೆ ಮಾರ್ಗದರ್ಶನವಾಗಬೇಕು ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ಆಶ್ರಯದಲ್ಲಿ ನಡೆದ ಕುಂದಾಪುರ ತಾಲ್ಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಅವರ 170ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವನ್ನು ಸದೃಢ ನಿಲುವಿನ ಅಪೂರ್ವ ಸಂದೇಶಗಳ ಅನುಷ್ಠಾನದ ಮುಖಾಂತರ ಮುನುಕುಲದ ಸುಧಾರಣೆಯ ಸರಿದಾರಿಯಲ್ಲಿ ಮುನ್ನಡೆಸಿದ ಮಹಾಮಾನ್ಯರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಜಯಂತಿ ಕಾರ್ಯಕ್ರಮ ಸಾಂಕೇತಿಕ ಕಾರ್ಯಕ್ರಮವಷ್ಟೇ ಆಗದೆ ಅವರು ಸಾರಿದ ಸಂದೇಶ ಸಮಾಜವನ್ನು ತಲುಪುವಂತೆ ಆಗಬೇಕಿದೆ. ಸಂಘರ್ಷ ರಹಿತವಾಗಿ ಮೌನ ಕ್ರಾಂತಿಯಿಂದ ಸಮಾಜ ಬೆಳಗುವಂತೆ ಮಾಡಿದವರು ನಾರಾಯಣ ಗುರುಗಳ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಅವರು ಹೇಳಿದರು.
ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಸಮಾಜದಲ್ಲಿ ಬೇರು ಬಿಟ್ಟಿದ್ದ ಅಸ್ಪೃಶ್ಯತೆ, ಶೋಷಣೆ, ಮೂಢನಂಬಿಕೆಯಂತಹ ಅನಿಷ್ಠ ಪದ್ಧತಿಯ ವಿರುದ್ಧ ಸಾಮಾಜಿಕ ಕ್ರಾಂತಿ ಮಾಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದ ಅನೇಕ ತೊಡಕುಗಳನ್ನು ಹೋಗಲಾಡಿಸಿ, ಸಮಾಜದ ಸುಧಾರಣೆಗಾಗಿ ಶ್ರಮಿಸಿದ ದಾರ್ಶನಿಕರು ಎಂದು ಹೇಳಿದರು.
ಶೋಷಿತ ವರ್ಗಗಳ ಮೇಲೆ ಆಗುತ್ತಿರವ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದ ಅಗ್ರಗಣ್ಯಮಾನ್ಯರು ನಾರಾಯಣ ಗುರುಗಳು. ಶಿಕ್ಷಣದಿಂದಲೇ ಈ ಸಮಾಜದ ಎಲ್ಲಾ ಸಮಸ್ಯೆಗಳನ್ನು ದೂರಿಕರಿಸಲು ಸಾಧ್ಯವೆಂದು ಅವರು ಪ್ರತಿಪಾದಿಸಿದರು ಎಂದರು.
ಮಾತ್ರವಲ್ಲದೇ, ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ತರುವ ಬಗ್ಗೆ ಶಾಸಕರು ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಲ್ಲದೆ, ಕುಂದಾಪುರ, ಬೈಂದೂರು ತಾಲೂಕಿನ ವ್ಯಾಪ್ತಿಯಲ್ಲಿರುವ ಹಳ್ಳಿ ಪ್ರದೇಶಗಳ ಶೋಷಿತ ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸಿ ವಿದ್ಯಾರ್ಜನೆಗೆ ಅನುಕೂಲ ಆಗುವಂತೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಸಹಾಯಕ ಆಯುಕ್ತ ಮಹೇಶ್‌ಚಂದ್ರ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಧರ್, ತಾಲೂಕು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಗಿರಜಾ ಮಾಣಿಗೋಪಾಲ್, ತಾಲೂಕು ಬಿಲ್ಲವ ಯುವ ಸಂಘದ ಅಧ್ಯಕ್ಷ ಸಂದೇಶ್ ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಹಶಿಲ್ದಾರ್ ಶೋಭಾಲಕ್ಷ್ಮೀ ಪ್ರಸ್ತಾವಿಸಿ ಸ್ವಾಗತಿಸಿದರು.











