ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ, ಪೋಷಕರು ಹಾಗೂ ಶಿಕ್ಷಕರ ನಡುವಿನ ಹೊಂದಾಣಿಕೆಯ ಕುರಿತು ಕಾರ್ಯಾಗಾರವನ್ನು ಕಾಳಾವರ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಯೋಗನರಸಿಂಹಸ್ವಾಮಿಯವರು ಭಾಗವಹಿಸಿದ್ದರು.
ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪರೋಕ್ಷವಾಗಿ ಪೋಷಕರು ಸಹಕರಿಸಬಹುದೆನ್ನುವುದನ್ನು ಉದಾಹರಣೆಗಳ ಮೂಲಕ ತಿಳಿಸಿದರು. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡಲು ವೈಯಕ್ತಿಕ ವೇಳಾಪಟ್ಟಿ ತಯಾರಿಸಿ ಸತತವಾಗಿ, 21 ದಿನಗಳ ಕಾಲ ಪಾಲಿಸಿದರೆ ಮುಂದದು ಸಹಜವಾಗಿ ಹವ್ಯಾಸವಾಗಿಬಿಡುತ್ತೆ ಎಂದರು. ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ರ ಕಥೆಯ ಮೂಲಕ ಶಿಕ್ಷಕರಿಗೂ ಎಚ್ಚರಿಕೆ ಮಾತುಗಳನ್ನು ನೆನಪಿಸಿದರು. ಸುಮಾರು ಒಂದು ಗಂಟೆ ಅವಧಿಯ ಉಪನ್ಯಾಸವು ಅತ್ಯಂತ ಉಪಯುಕ್ತವಾಗಿ ಮೂಡಿಬಂದಿತು.
ಸಭೆಯ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಸತೀಶ್ ಜೋಗಿ ವಹಿಸಿದ್ದರು.
ಎಲ್ಲಾ ಪೋಷಕರ ಪ್ರತಿನಿಧಿ ಹೆಸ್ಕತ್ತೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್ ರವೂಫ್ ಅತಿಥಿಗಳ ಸಾಲಿನಲ್ಲಿ ಮಾತನಾಡುತ್ತಾ ಕಾರ್ಯಕ್ರಮ ಅತ್ಯಂತ ಉಪಯುಕ್ತ ಹಾಗೂ ಅನುಕರಣೀಯ ಎಂದರು.
ಇದೇ ಸಂದರ್ಭದಲ್ಲಿ ಶಾಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ವಿಜೇತರಿಗೆ ಹಾಗೂ ಪ್ರಥಮ ರೂಪಣಾತ್ಮಕ ಮೌಲ್ಯಮಾಪನದ ಸಾಧಕರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯೋಪಾಧ್ಯಾಯ ಗಣೇಶ್ ಶೆಟ್ಟಿಗಾರರ ಪರಿಕಲ್ಪನೆಯಾದ ಶೈಕ್ಷಣಿಕ, ಶಿಸ್ತು, ಸ್ವಚ್ಛತೆಯಲ್ಲಿ ಉತ್ತಮ ಸಾಧನೆ ತೋರಿದ ತರಗತಿಗೆ ಪ್ರತಿ ತಿಂಗಳಲ್ಲಿ ಮೌಲ್ಯಮಾಪನ ನಡೆಸಿ ವಿಜೇತ ತರಗತಿಗೆ ರೋಲಿಂಗ್ ಶೀಲ್ಡ್ ನೀಡುವ ಕಾರ್ಯ ನೆರವೇರಿತು.
ಗಣೇಶ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ ದಿನೇಶ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮಹಾಬಲೇಶ್ವರ ಭಾಗವತ್ ವಂದಿಸಿದರು.











