ಯಡಾಡಿ ಮತ್ಯಾಡಿ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಮುದ್ದು ಕೃಷ್ಣ ಸ್ಪರ್ಧೆ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಶ್ರೀಕೃಷ್ಣನ ಬಾಲ್ಯ ಲೀಲೆಗಳು ವಾಸ್ತವಕ್ಕೆ ಅತೀ ಹತ್ತಿರವಾದುದರಿಂದಲೇ ಪ್ರತೀ ಮಗುವಿನಲ್ಲಿ ನಾವು ದೇವರನ್ನು ಕಾಣುತ್ತೇವೆ. ಬಾಲಕೃಷ್ಣನ ಚೇಷ್ಟೆಗಳಿಗೂ ನಮ್ಮ ಮಕ್ಕಳಿಗೂ ಭಾವನಾತ್ಮಕವಾದ ಸಂಭಂಧವಿರುವುದರಿಂದಲೇ ಮುದ್ದು ಕೃಷ್ಣನ ವೇಷ ಹಾಕಿ ಸಂಭ್ರಮಿಸುತ್ತೇವೆ. ಹಾಗಾಗಿಯೇ ಶ್ರೀ ಕೃಷ್ಣನನ್ನು ನಾವು ಶತಾವತಾರಿ ಎಂದು ಕರೆಯುತ್ತೇವೆ ಎಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಜೀವನ್ ರಾಂ ಸುಳ್ಯ ಹೇಳಿದರು.
ಶನಿವಾರ ಬೆಳಿಗ್ಗೆ ಯಡಾಡಿ ಮತ್ಯಾಡಿ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಮುದ್ದು ಕೃಷ್ಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲ ತಾಯಂದಿರು ತಮ್ಮ ಪುಟ್ಟ ಮಕ್ಕಳಲ್ಲಿ ಕೃಷ್ಣನನ್ನು ಕಾಣುತ್ತಾರೆ. ಕೃಷ್ಣನ ಬಾಲ್ಯ ಲೀಲೆಗಳೇ ವಿಶೇಷವಾದದು. ಮಕ್ಕಳಿಗೆ ಬಾಲ್ಯದಿಂದಲೇ ಪುರಾಣದ ಮೌಲ್ಯಗಳನ್ನು ತಿಳಿಸಬೇಕು, ಪುರಾಣ ಪಾತ್ರಗಳ ಮನವರಿಕೆ ಮಾಡಬೇಕು, ನಾಟಕ, ಯಕ್ಷಗಾನ, ಕಲೆಗಳ ಸಾಂಸ್ಕೃತಿಕ ಲೋಕದ ಪರಿಚಯ ಮಾಡಬೇಕು ಎಂದು ಹೇಳಿದ ಅವರು ನನ್ನ ಬಹುತೇಕ ನಾಟಕಗಳಲ್ಲಿ ಕ್ರಷ್ಣನ ಪಾತ್ರ ಬರುತ್ತದೆ ಎಂದರು.
ಇದೇ ಸಂದರ್ಭ ಚೆಸ್ ಸ್ಪರ್ಧೆಯಲ್ಲಿ ಅಮೋಘ ಸಾಧನೆಗೈದ ಪ್ರಕೃತಿ ಪಿ.ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಕುಂದಾಪುರ ಸುಜ್ಜಾನ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು.
ಭರತನಾಟ್ಯ ಕಲಾವಿದ ವಿದ್ವಾನ್ ಕೆ.ಭವಾನಿ ಶಂಕರ್, ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ, ಭರತ ನಾಟ್ಯ ಕಲಾವಿದೆ ವಿದುಷಿ ವಿದ್ಯಾ ಸಂದೇಶ್, ಭರತ ನಾಟ್ಯ ಕಲಾವಿದೆ ವಿದೂಷಿ ಸಪ್ನ್ ಕಿಶೋರ್, ಕುಂದಾಪುರ ಸುಜ್ಜಾನ್ ಎಜುಕೇಶನ್ ಟ್ರಸ್ಟ್ ನ ಪ್ರತಾಪಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಕುಂದಾಪುರ ಸುಜ್ಜಾನ್ ಎಜುಕೇಶನ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಖ್ಯೋಪಾಧ್ಯಾಯ ಪ್ರದೀಪ್ ಕೆ. ವಂದಿಸಿದರು. ಸಂತೋಷ್ ಕುಮಾರ್ ಮತ್ತು ರೇಣುಕಾ ಕಾರ್ಯಕ್ರಮ ನಿರ್ವಹಿಸಿದರು.ಸಭಾ ಕಾರ್ಯಕ್ರಮದ ಬಳಿಕ ಒಂದರಿಂದ ಮೂರು ವರ್ಷ, ನಾಲ್ಕರಿಂದ 6 ವರ್ಷ ವಯೋಮಿತಿಯ ಮಕ್ಕಳ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು.











