ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಮಾಜಮುಖಿ ಚಿಂತನೆ ಬೆಳೆಸಿಕೊಂಡು ಸಮಾಜದ ಅಭ್ಯುದಯಕ್ಕೆ ಲಯನ್ಸ ಕ್ಲಬ್ ಹಂಗಳೂರು ಶ್ರಮಿಸುತ್ತಿದೆ ಎಂದು ಜಿಲ್ಲಾ ಗವರ್ನರ್ ಹನೀಫ್ ಮಹಮ್ಮದ್ ಹೇಳಿದರು.
ಅವರು ಕುಂದಾಪುರದ ಆಶೀರ್ವಾದ ಹಾಲ್‍ನಲ್ಲಿ ಲಯನ್ಸ್ ಕ್ಲಬ್ ಹಂಗಳೂರು ವತಿಯಿಂದ ನಡೆದ ನೂತನ ಲಯನ್ಸ್ ಕ್ಲಬ್ ಕುಂದಾಪುರ ವೈಟ್ ಝೋನ್ ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಹಂಗಳೂರು ಅಧ್ಯಕ್ಷ ರೋವನ್ ಡಿ’ಕೋಸ್ತ ಇವರ ಅವಧಿಯಲ್ಲಿ ಅತ್ಯುತ್ತಮ ಕಾರ್ಯಕ್ರಮ ಮಾಡುವುದರ ಮೂಲಕ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಶ್ಲಾಘಿಸಿದರು. ಗಳಿಸುವುದಕ್ಕಿಂತ ಉಳಿಸುವುದು ಉತ್ತಮ ಈ ಮೂಲಕ ಹಂಗಳೂರು ಲಯನ್ಸ್ ಕ್ಲಬ್ ಕಾರ್ಯಕ್ರಮಗಳು ಮಾದರಿಯಾಗಿದೆ. ಅತೀ ಕಡಿಮೆ ಅವಧಿಯಲ್ಲಿ ನೂತನ ಲಯನ್ಸ್ ಕ್ಲಬ್ ರಚನೆ ಮಾಡಿದ್ದು ಹೆಮ್ಮೆಯ ವಿಚಾರ ಎಂದರು.
ಮಾಜಿ ಜಿಲ್ಲಾ ಗವರ್ನರ್ ಎನ್.ಎಮ್. ಹೆಗ್ಡೆ ನೂತನ ಲಯನ್ಸ್ ಕ್ಲಬ್ ನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ, ಪದಗ್ರಹಣ ನೆರವೇರಿಸಿದರು.
ನೂತನ ಲಯನ್ಸ್ ಕ್ಲಬ್ ಕುಂದಾಪುರ ವೈಟ್ ಝೋನ್ ಅಧ್ಯಕ್ಷರಾಗಿ ವಿಜಯ ಭಂಡಾರಿ, ಕಾರ್ಯದರ್ಶಿ ಸುಧೀರ್ ನಾಯಕ್, ಖಜಾಂಚಿ ಹುಸೇನ್ ಹೈಕಾಡಿ ಅಧಿಕಾರ ಸ್ವೀಕರಿಸಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆಗೈದ ಸೃಜನ್ ಎಸ್ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‍ನ ಸ್ವಪ್ನ ಸುರೇಶ್, ರಾಜೀವ್ ಕೋಟ್ಯಾನ್, ಅರುಣ್ ಕುಮಾರ್ ಹೆಗ್ಡೆ, ಪಾಂಡುರಂಗ ಆಚಾರ್, ಬಿ.ಹರಿಪ್ರಸಾದ ರೈ, ಬಿ.ಸೋಮನಾಥ್ ಹೆಗ್ಡೆ, ಹೆಚ್. ಬಾಲಕೃಷ್ಣ ಶೆಟ್ಟಿ, ರಜತ್ ಕುಮಾರ್ ಹೆಗ್ಡೆ, ಮಾಥ್ಯು ಜೊಸೇಫ್ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಹಂಗಳೂರು ಅಧ್ಯಕ್ಷ ರೋವನ್ ಡಿ’ಕೋಸ್ತ್ ಸ್ವಾಗತಿಸಿ, ಶಾಂತಿ ಬರೆಟ್ಟೋ ಪ್ರಾರ್ಥಿಸಿದರು. ಖಜಾಂಚಿ ಪುನೀತ್ ಶೆಟ್ಟಿ ವಂದಿಸಿದರು. ಗ್ರೇಟ್ಟ್ ಡಿ’ಕೋಸ್ತ್ ಕಾರ್ಯಕ್ರಮ ನಿರೂಪಿಸಿದರು.











