ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಕಳೆದ ಕೆಲವಾರು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದು ಈ ಬಾರಿಯ 68ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ನಡೆಸಬೇಕೆಂಬ ಉದ್ದೇಶದಿಂದ ನವೆಂಬರ್ 1ರಿಂದ 7ರವರೆಗೆ ‘ಕನ್ನಡ ಹಬ್ಬ’ವನ್ನು ಪ್ರತೀ ದಿನ ಸಂಜೆ 6ರಿಂದ ಕುಂದಾಪುರ ಬೋರ್ಡ್ ಹೈಸ್ಕೂಲಿನ ಶ್ರೀ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಆಚರಿಸಲಾಗುತ್ತದೆ. ಸಭಾ ಕಾರ್ಯಕ್ರಮ, ಉಪನ್ಯಾಸ ಮತ್ತು ಮನೋರಂಜನೆ ಹೀಗೆ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಜನರಿಗೆ ನೀಡಬೇಕೆಂಬ ಹಂಬಲದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.
ಕುಂದಾಪುರದ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಪ್ತಾಹಕ್ಕೆ ಚಾಲನೆ ನೀಡುವ ಸಲುವಾಗಿ ಆಕ್ಟೋಬರ್ 31 ರಂದು “ಕನ್ನಡ ರಥೋತ್ಸವ” ಎಂಬ ಪುರ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಮೆರವಣಿಗೆಗೆ ಬಿ. ಅಪ್ಪಣ್ಣ ಹೆಗ್ಡೆಯವರು ಶುಭಾಶಂಸನೆ ಮಾಡಲಿದ್ದು, ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ಕನ್ನಡ ರಥವನ್ನು ಉದ್ಘಾಟಿಸಲಿದ್ದಾರೆ. ಪೋಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಸಂಸದರಾದ ಬಿ.ವೈ ರಾಘವೇಂದ್ರ ಹಾಗೂ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಸಚಿವರು, ಶಾಸಕರು, ಮಾಜಿ ಸಚಿವರು, ಶಾಸಕರು, ವಿವಿಧ ರಾಜಕೀಯ ಪಕ್ಷಗಳ ಧುರೀಣರು, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರು, ಕುಂದಾಪುರ ತಾಲೂಕು ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು, ಕುಂದಾಪುರ ಪುರಸಭೆಯ ಅಧ್ಯಕ್ಷರು, ಸಹಕಾರಿ ಧುರೀಣರು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು. ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕನ್ನಡಾಭಿಮಾನಿಗಳು ಪಕ್ಷಾತೀತ ಮತ್ತು ಧರ್ಮಾತೀತರಾಗಿ ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಕನ್ನಡ ರಥೋತ್ಸವ ಪುರ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚಂಡೆ ವಾದನ, ತಟ್ಟಿರಾಯ, ಬೊಂಬೆ ಕುಣಿತ, ಅನ್ಯ ಭಾಷಿಕರು ಇತ್ಯಾದಿ ಕಲಾ ತಂಡಗಳು ಮತ್ತು ಭಜನಾ ತಂಡಗಳು, ಬೆಂಕಿಯಾಟ, ದಫ್ ಇತ್ಯಾದಿ ರಂಜನೆ ನೀಡುವ ಆಕರ್ಷಕ ತಂಡಗಳನ್ನು ಮೆರವಣಿಗೆಯಲ್ಲಿ ಜೋಡಿಸಿಕೊಳ್ಳುವ ಹೊಣೆಗಾರಿಕೆಯನ್ನು ಕುಂದಾಪುರದ ವಿವಿಧ ಸಂಘ ಸಂಸ್ಥೆಗಳು ಹೊತ್ತಿವೆ. ಕನ್ನಡ ಹಬ್ಬ ಸಪ್ತಾಹದ ಹಿನ್ನೆಲೆಯಲ್ಲಿ ನಗರವನ್ನು ವಿದ್ಯುತ್ ದೀಪದಿಂದ ಅಲಂಕಾರಗೊಳಿಸಲು ಧ್ವನಿ ಮತ್ತು ಬೆಳಕು ಸಂಘಟನೆಯವರು ಹೊಣೆ ಹೊತ್ತಿದ್ದು, ಅಂಗಡಿ ಮುಂಗಟ್ಟುಗಳಿಗೆ ಸ್ವತಃ ಮಾಲಕರೇ ಸ್ವಯಂ ಪ್ರೇರಿತರಾಗಿ ದೀಪಾಲಂಕಾರವನ್ನು ಮಾಡಿಕೊಳ್ಳುವವರಿದ್ದಾರೆ ಎಂದರು.
ಸುದ್ಧಿಗೋಷ್ಟಿಯಲ್ಲಿ ಕಲಾಕ್ಷೇತ್ರದ ಕೆ.ಆರ್ ನಾಯ್ಕ್, ದಾಮೋದರ ಪೈ, ವಿಕ್ರಮ್ ಪೈ, ಗಿರೀಶ್ ಜಿ.ಕೆ, ರಾಜೇಶ ಕಾವೇರಿ, ರಾಮಚಂದ್ರ ಉಪಸ್ಥಿತರಿದ್ದರು.











