ತಗ್ಗರ್ಸೆ(ಮೈಕಳ) :ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ವಿನೂತನ ಪರಿಕಲ್ಪನೆಯ ಅಶಕ್ತ ಗೋವುಗಳ ಪಾಲನ ಕೇಂದ್ರ “ಗಂಟಿಧಾಮ” ಉದ್ಘಾಟನೆ
ಕುಂದಾಪುರ ಮಿರರ್ ಸುದ್ದಿ…



ಬೈಂದೂರು :ನಮ್ಮ ನಿತ್ಯ ಜೀವನದಲ್ಲಿ ಗೋವಿನ ಪ್ರಾಮುಖ್ಯತೆ ಇದೆ. ಯೋಗಿಗಳಿಗೆ, ರೋಗಿಗಳಿಗೆ, ಎಲ್ಲರಿಗೂ ಗೋ ಆಧಾರ. ವೈದಿಕ, ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ, ಕೃಷಿ, ಆರೋಗ್ಯದ ವಿಚಾರದಲ್ಲಿಯೂ ಕೂಡಾ ಗೋವಿನ ಪಾತ್ರವನ್ನು ಕಾಣಬಹುದು. ಗೋವು ಎಂದರೆ ಜಗತ್ತು ಪ್ರಾಣಿ ಎಂದು ಗುರುತಿಸಿದರೆ ಭಾರತೀಯರು ಗೋಮಾತೆ ಎಂದು ಕರೆಯುತ್ತೇವೆ. ಭಾರತೀಯ ಸಂಪ್ರದಾಯ, ಜೀವನಪದ್ದತಿ, ಪರಂಪರೆಯಲ್ಲಿ ಗೋವಿನ ಮಹತ್ವ ಮನಗಾಣಬಹುದು ಎಂದು ವಿ.ಹಿಂ.ಪ. ಕರ್ನಾಟಕ ದಕ್ಷಿಣ ಪ್ರಾಂತದ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.
ಅವರು ತಗ್ಗರ್ಸೆ ಗ್ರಾಮದ ಮೈಕಳ ಎಂಬಲ್ಲಿ ನಿರ್ಮಿಸಲಾದ ಗಂಟಿಹೊಳೆಯ ಗಂಟಿಧಾಮ ( ಆಶಕ್ತ ಗೋವುಗಳ ಪಾಲನಾ ಕೇಂದ್ರ)ವನ್ನು ಉದ್ಘಾಟನೆ ಯ ಕಾರ್ಯಕ್ರಮದ ಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಗೋಅಂಶದಿಂದಲೇ ಗ್ರಾಮಗಳು, ರೈತರು ಹೀಗೆ ಸರಪಣಿ ಮುಂದುವರಿಯುತ್ತದೆ. ಗೋವಿಗೆ ವಿಶೇಷವಾದ ಮಹತ್ವ ನಮ್ಮ ಸಂಸ್ಕೃತಿ ನೀಡಿದೆ. ಹಾಲು ಕೊಡುವ ಮಾತ್ರಕ್ಕೆ ಗೋವನ್ನು ಮಾತೆ ಎನ್ನುತ್ತಿಲ್ಲ. ಋಷಿ ಪರಂಪರೆಗೂ ಗೋಅಂಶ ಕಾರಣ, ವೈದಿಕ ವಿಧಿವಿಧಾನಗಳಿಗೂ ಗೋಅಂಶ ಕಾರಣ, ಮಾತ್ರವಲ್ಲ ಈಗ ಆರೋಗ್ಯ, ಔಷಧ ಇತ್ಯಾದಿಗಳಲ್ಲೂ ಗೋ ಉತ್ಪನ್ನಗಳ ಬಳಕೆ ಮಾಡಲಾಗುತ್ತದೆ. ಆದ್ದರಿಂದ ಗೋವಿನ ಶ್ರೇಷ್ಟತೆ ಸುಲಭವಾಗಿ ಮನಗಾಣಬಹುದು ಎಂದರು.
ಗೋವುಗಳ ಪಾಲನೆ, ರಕ್ಷಣೆ ಮಾತ್ರವಲ್ಲ, ಅಪಘಾತಕ್ಕಿಡಾದ ಗೋವುಗಳಿಗೆ ಆರೈಕೆ ನೀಡುವ ಕೆಲಸವು ಆಗಬೇಕು. ಆ ಹಿನ್ನೆಲೆಯಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಅವರು ಒಬ್ಬ ಜನಪ್ರತಿನಿಧಿಯಾಗಿ ಹಿಂದುತ್ವ, ಧರ್ಮ, ಗೋವು ರಕ್ಷಣೆಯಲ್ಲಿ ನಿರಂತರವಾದ ಪ್ರಯತ್ನ ಮಾಡುತ್ತ ಬಂದಿರುವುದು ವಿಶೇಷವಾಗಿದೆ ಎಂದರು.
ಹೃದಯವಿದ್ಯಾ ಫೌಂಡೇಷನ್ ಅಧ್ಯಕ್ಷ ಶ್ರೀ ಗುರು ವಿದ್ಯಾಸಾಗರ್ ಅಶಕ್ತ ಗೋವುಗಳ ಪಾಲನ ಕೇಂದ್ರ ಗಂಟಿಧಾಮ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಹಿಸಿದ್ದರು.
ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ತಿಮ್ಮಣ್ಣ ಹೆಗಡೆ ಹಾಲಂಬೇರು, ಸಮೃದ್ಧ ಬೈಂದೂರು ಟ್ರಸ್ಟ್ ನ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ಗೋಪಾಲ ಪೂಜಾರಿ ಸ್ವಾಗತಿಸಿ, ಭಾಗಿರಥೀ ಮಯ್ಯಾಡಿ ಪ್ರಾರ್ಥಿಸಿದರು. ಗಣಪತಿ ಹೋಬಳಿದಾರ್, ಗಜಾನನ್ ಕಾರ್ಯಕ್ರಮ ನಿರೂಪಿಸಿದರು.











