ಗೋವುಗಳಿಗೆ ತಾಯಿ ಸ್ಥಾನ ನೀಡಿ – ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮನೆಯ ಒಳಗೆ ತಂದೆ ತಾಯಿಯನ್ನು ದೇವರೆಂದು ಪೂಜಿಸುವಂತೆ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಕೂಡಾ ದೇವರೆಂದು ಪೂಜಿಸುವ ಪರಂಪರೆ ನಮ್ಮದು. ನಮ್ಮ ಸಂಸ್ಕೃತಿಯಲ್ಲಿ ಗೋವು ವಿಶೇಷ ಮಹತ್ವಿಕೆ ಪಡೆದುಕೊಂಡಿದೆ. ಗೋಮಾತೆಯನ್ನು ತಾಯಿಗೆ ಸಮಾನವೆಂದು ಭಾವಿಸುತ್ತೇವೆ. ನಮ್ಮ ಜೀವನದ ಕೊನೆಯ ತನಕವೂ ಹಾಲು, ಮೊಸರು, ಬೆಣ್ಣೆ ನೀಡುವ ಗೋವು ನಿಜಕ್ಕೂ ಶ್ರೇಷ್ಟಳು. ಗೋ ಪೂಜೆ ಎನ್ನುವುದು ನಿತ್ಯವೂ ಆಗಬೇಕು ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ಮದ್ವಾಚಾರ್ಯ ಮಹಾ ಸಂಸ್ಥಾನದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಅವರು ಮಂದಾರ್ತಿಯ ಲಕ್ಷ್ಮೀ ಫೀಡ್ಸ್ ಮತ್ತು ಫಾರ್ಮ್ಸ್ ಹಸುಗಳ ಬಂಜೆತನ ನಿವಾರಣೆಗೆ ವಿಸ್ಮಯ ಉತ್ಪನ್ನ ಬಿಡುಗಡೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಭೂಮಿಯ ಮೇಲಿರುವ ಆಹಾರ ಉತ್ಪನ್ನಗಳು, ಕೃಷಿ ಉತ್ಪನ್ನಗಳಲ್ಲಿ ಹಸುವಿನ ಅಂಶವನ್ನು ಕಾಣಬಹುದು. ಇವತ್ತು ಮನೆಯಲ್ಲಿ ಹಸು ಸಾಕುವವರು ಕಡಿಮೆಯಾದರೂ ಕೂಡಾ ನಿತ್ಯ ಹಾಲನ್ನು ಬಳಸುತ್ತೇವೆ. ಅದು ದೇಶಿ ಹಸು ಆಗಿರಬಹುದು, ಸುಧಾರಿತ ಹಸು, ಅಥವಾ ವಿದೇಶದಿಂದ ಬಂದಿರಬಹುದು. ಆದರೆ ಗೋ ಎಂದರೆ ಪೂಜ್ಯ ಭಾವದಿಂದ ಕಾಣುತ್ತೇವೆ. ಗೋವನ್ನು ಆರಾಧಿಸುವ ಪರಂಪರೆಯಿಂದ ಯಶಸ್ಸು ಸಾಧ್ಯವಿದೆ. ಹೊಸದಾಗಿ ಇಲ್ಲಿ ಆರಂಭಿಸಿದ ಉತ್ಪನ್ನಗಳು ಯಶಸ್ಸು ಕಾಣಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಹೈನುಗಾರಿಕೆಯನ್ನು ಆಸಕ್ತಿಯಿಂದ ಸ್ವಂತ ಉದ್ಯಮವಾಗಿ ಮಾಡಿದರೆ ಯಶಸ್ಸು ಗಳಿಸಬಹುದು. ಹೈನುಗಾರಿಕೆಯಲ್ಲಿ ನಿರಂತರ ಆಸಕ್ತಿ, ಚಟುವಟಿಕೆಯಿಂದ ಕಾರ್ಯನಿರ್ವಹಿಸಬೇಕು. ಸೇವಾ ದೃಷ್ಟಿಯಿಂದ ಮಾಡಿದಾಗ ಅದರಿಂದ ಆಧಾಯವೂ ಬರುತ್ತದೆ. ಹೈನುಗಾರಿಕೆಯನ್ನು ಲಾಭದಾಯಕವಾಗಿ ಮಾಡಲು ಇವತ್ತು ಸಾಕಷ್ಟು ವೈಜ್ಞಾನಿಕ ವಿಧಾನಗಳು ಬಂದಿವೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕವೇ ಹೈನುಗಾರರಿಗೆ ಅನುಕೂಲತೆಗಳು ಸಿಗುತ್ತಿವೆ. ಹಸುಗಳಲ್ಲಿ ಬಂಜೆತನ ನಿವಾರಣೆ ಹಿಂದೆ ತುಂಬಾ ಕಷ್ಟದಾಯವಾಗಿತ್ತು. ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ. ಗ್ರಾಮ ಮಟ್ಟದಲ್ಲಿ ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ ಎಂದು ಹೇಳಿದ ಅವರು ಉಡುಪರು ಹೈನೋದ್ಯಮದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡುತ್ತಾ ಬಂದವರು. ಹಸುಗಳ ಬಂಜೆತನ ನಿವಾರಣೆಗೆ ವಿಸ್ಮಯ ಉತ್ಪನ್ನ ಮಾರುಕಟ್ಟೆಯಲ್ಲಿ ಜನಮನ್ನಣೆ ಪಡೆದುಕೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಗೋ ಪೂಜೆ ನೆರೆವೆರೆಸಿ, ದನಕ್ಕೆ ವಿಸ್ಮಯ ಪಶು ಆಹಾರ ನೀಡಿದರು.
ಹೈನುಗಾರಿಕೆಯಲ್ಲಿ ಸಾಧನೆಗೈದ ರೈತರರಾದ ಮಲ್ಲಿಕಾ ಮಧ್ಯಸ್ಥ ಹಾಗೂ ಕೆ.ಜಗನ್ನಾಥ್ ಪೂಜಾರಿ ಇವರನ್ನು ಸನ್ಮಾನಿಸಿ, ಸಾಂಕೇತಿಕವಾಗಿ ವಿಸ್ಮಯ ಪಶು ಆಹಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಎಮ್. ಶ್ರೀ ಪತಿ ಅಡಿಗ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರಾದ ಹೆಚ್. ಧನಂಜಯ್ ಶೆಟ್ಟಿ, ಮಂದಾರ್ತಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹೆಚ್. ವಿಠಲ ಶೆಟ್ಟಿ, ಉಡುಪಿ ಜಿಲ್ಲಾ ಪಶು ಪಾಲನಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಡಾ. ಸರ್ಮೋತ್ತಮ ಉಡುಪ, ಲಕ್ಷ್ಮೀ ಫೀಡ್ಸ್ ಮತ್ತು ಫಾರ್ಮ್ಸ್ ಪಾಲುದಾರರಾದ ಕೆ.ಮಲ್ಲಿಕ ಉಡುಪ, ಕೆ.ಸಂಜಯ ಉಡುಪ ಉಪಸ್ಥಿತರಿದ್ದರು.
ಲಕ್ಷ್ಮೀ ಫೀಡ್ಸ್ ಮತ್ತು ಫಾರ್ಮ್ಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಕೆ.ಮಹೇಶ್ ಉಡುಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶ್ರೀಮತಿ ಸಾಧನ ಪ್ರಾರ್ಥನೆಗೈದರು. ಅಂಜಲಿ ವಂದಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.











