ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮಕ್ಕಳು ಬಾಲ್ಯದಲ್ಲಿಯೇ ದೊಡ್ಡ ಕನಸುಗಳನ್ನು ಕಂಡರೆ ಭವಿಷ್ಯದಲ್ಲಿ ಸಾಧನೆ ಸುಲಭ ಎಂದು ಹೆಗ್ಗದ್ದೆ ಸ್ಟುಡಿಯೋದ ಸಂದೀಪ್ ಶೆಟ್ಟಿ ಹೆಗ್ಗದ್ದೆ ಹೇಳಿದರು.
ಅವರು ಮಂಗಳವಾರ ಸಂಜೆ ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಶಿಕ್ಷಣ ಕ್ಯಾಂಪಸ್ ನಲ್ಲಿ ಸುಜ್ಞಾನ್ ಪದವಿ ಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹಮ್ಮಿಕೊಳ್ಳಲಾದ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಿವೃತ್ತ ಪ್ರೊಫೆಸರ್ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಯಾರೇ ತಪ್ಪು ಮಾಡಿದರೆ ಅವರಿಗೆ ಶಿಕ್ಷೆಯಾಗುತ್ತದೆ. ಆದರೆ ಶಿಕ್ಷಕ ತಪ್ಪು ಮಾಡಿದರೆ ಅವರ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶಿಕ್ಷೆಯಾಗುತ್ತದೆ. ಆದ್ದರಿಂದ ಶಿಕ್ಷಕರ ಜವಾಬ್ಧಾರಿ ಮಹತ್ತರವಾದದ್ದು ಎಂದರು.
ದೀಪಾವಳಿ ಪ್ತಯುಕ್ತ ಶಿಕ್ಷಣ ಸಂಸ್ಥೆಯಲ್ಲಿ ಕರಾವಳಿಯ ಸಂಪ್ರದಾಯದಂತೆ ಬಲೀಂದ್ರ ಕೂಗುವುದು, ಆಯುಧ ಪೂಜೆ, ಗೋಪೂಜೆ ಹಾಗೂ ತುಳಸೀ ಪೂಜೆಯನ್ನು ವಿಶೇಷವಾಗಿ ನಡೆಸಲಾಯಿತು.
ಸುಜ್ಞಾನ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸಂಸ್ಥೆ ಬೆಳೆದು ಬಂದ ರೀತಿಯನ್ನು ವಿವರಿಸಿದರು. ಕೋಶಾಧಿಕಾರಿ ಭರತ್ ಶೆಟ್ಟಿ ಪ್ರಾಸ್ತಾವಿಸಿದರು. ಕಾರ್ಯದರ್ಶಿಗಳಾದ ಪ್ರತಾಪ್ ಚಂದ್ರ ಶೆಟ್ಟಿ, ಮುಖ್ಯ ಶಿಕ್ಷಕರಾದ ಪ್ರದೀಪ್ ಬಿಲ್ಲವ ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು











