ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಪರಿಸರವಾದಿ ಕೊರ್ಗಿ ವಿಠಲ ಶೆಟ್ಟಿ ಅವರಿಗೆ ನಾಗರಿಕ ಸಂಮಾನ ಕಾರ್ಯಕ್ರಮವನ್ನು ಡಿ.8 ಭಾನುವಾರ ಸಂಜೆ 6 ಗಂಟೆಗೆ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ನಡೆಯಲಿದೆ ಎಂದು ಕೊರ್ಗಿ ವಿಠಲ ಶೆಟ್ಟಿ ಅಭಿನಂದನಾ ಸಮಿತಿ ಸದಸ್ಯ ಡಾ.ಅರುಣ್ ಶೆಟ್ಟಿ ಹೇಳಿದರು.
ಅವರು ಕುಂದಾಪುರ ಪ್ರೆಸ್‍ಕ್ಲಬ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಸಂಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ ವಹಿಸಲಿದ್ದಾರೆ. ಹಿರಿಯ ಧಾರ್ಮಿಕ ಮುಖಂಡರಾದ ಬಿ.ಅಪ್ಪಣ್ಣ ಹೆಗ್ಡೆ ಸಂಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಮಾಜಿ ಸಚಿವರಾದ ಕೆ.ಜಯಪ್ರಕಾಶ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಧನಂಜಯ ಶೆಟ್ಟಿ ಬಿ., ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಯು.ರಾಜೇಶ ಕಾರಂತ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದ ಪ್ರಯುಕ್ತ ಅಂದು ಬೆಳಿಗ್ಗೆ 9 ಗಂಟೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉಡುಪಿಯ ಆದರ್ಶ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳಿಂದ ನೆರವೇರಲಿದೆ. ಡಾ.ಸನ್ಮಾನ್ ಶೆಟ್ಟಿ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಲಿದ್ದಾರೆ.
ಸಂಜೆ 4 ಗಂಟೆಗೆ ಬಡಗುತಿಟ್ಟಿನ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ‘ಶ್ರೀಕೃಷ್ಣ ಪಾರಿಜಾತ’ ಪ್ರದರ್ಶನಗೊಳ್ಳಲಿದೆ.
ಸಂಜೆ 7.30ಕ್ಕೆ ದೇವದಾಸ ಕಾಪಿಕಾಡ್-ವಾಮಂಜೂರು-ಸಾಯಿ ಅಭಿನಯದ ವಿನೂತನ ಶೈಲಿಯ ಹಾಸ್ಯಮಯ ನಾಟಕ ‘ಯಾರೂ ಗ್ಯಾರಂಟಿ ಇಲ್ಲ’ ಪ್ರದರ್ಶನಗೊಳ್ಳಲಿದೆ ಎಂದರು.
ಕೊರ್ಗಿ ವಿಠಲ ಶೆಟ್ಟರ ಪರಿಸರ ಪ್ರೇಮ ಮಾದರಿಯಾಗಿದೆ. ಸಮಾಜಸೇವೆಯಲ್ಲಿಯೂ ಕೂಡಾ ಅವರು ಗುರುತಿಸಿಕೊಂಡವರು. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕೊರ್ಗಿ ವಿಠಲ ಶೆಟ್ಟರು ಕೊರ್ಗಿ ವಿಠಲ ಶೆಟ್ಟಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ, ಕುಂಭಾಶಿ ಮೂಲಕ ನಿರಂತರ ಸೇವೆ ನೀಡುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ 2024ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಟ್ರಸ್ಟಿನ ಖಜಾಂಚಿ ರಾಜಗೋಪಾಲ ಪುರಾಣಿಕ, ಪ್ರಚಾರ ಸಮಿತಿಯ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.











