ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಕುಂದಾಪುರ ತಾಲೂಕಿನ ಶ್ರೀ ಕ್ಷೇತ್ರ ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದಲ್ಲಿ ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ ಪೂರ್ವಭಾವಿಯಾಗಿ ದೇವಿಯ ರಕ್ತಚಂದನದ ನೂತನ ದಾರು ಬಿಂಬವನ್ನು ಆಕರ್ಷಕ ಶೋಭಾಯಾತ್ರೆ ಮೂಲಕ ದೈವಸ್ಥಾನಕ್ಕೆ ತರಲಾಯಿತು.
ದೇವಿಯ ರಕ್ತ ಚಂದನದ ನೂತನ ದಾರುಬಿಂಬವನ್ನು ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಭಾಶಿಯಿಂದ ಹೆಮ್ಮಾಡಿ ತನಕ ವಾಹನ ಜಾಥಾ ಮೂಲಕ ಹಾಗೂ ಹೆಮ್ಮಾಡಿಯಿಂದ ದೈವಸ್ಥಾನದ ತನಕ ಕಾಲ್ನಡಿಗೆಯಲ್ಲಿ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಆಕರ್ಷಕ ಪುರಮೆರವಣಿ ಮೂಲಕ ದೈವಸ್ಥಾನಕ್ಕೆ ತರಲಾಯಿತು.
ಸ್ಯಾಕ್ಸೋಫೋನ್ ವಾದ್ಯ, ಚಂಡೆ ವಾದನ, ಕೊಂಬು ಕಹಳೆ, ಮೀನಿನ ಕಲಾ ತಂಡ, ಬ್ಯಾಂಡ್ ಸೆಟ್, ಥೈಯ್ಯಂ ಕುಣಿತ, ಘಟೋತ್ಕಜ, ಡೊಳ್ಳು ಕುಣಿತ, ಕೀಲು ಕುದುರೆ, ಕೋಲದ ವೇಷ, ಯಕ್ಷಗಾನ ವೇಷ ಮೊದಲಾದವುಗಳು ಪುರಮೆರವಣಿಗೆಯ ಮೆರಗು ಹೆಚ್ಚಿಸಿತು. ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬ ಸಾಗಿ ಬಂದ ದಾರಿಯುದ್ದಕ್ಕೂ ನೆರೆದಿದ್ದ ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆದು ಕೃತಾರ್ಥರಾದರು.
22ರಂದು ಗುರು ದೇವತಾ ಪ್ರಾರ್ಥನೆಯೊಂದಿಗೆ ನೂತನ ದಾರುಬಿಂಬದ ಪ್ರತಿಷ್ಠೆ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಳ್ಳಲಿದೆ. 23ರಂದು ಶ್ರೀ ಭದ್ರಮಹಾಕಾಳಿ ಮೊದಲ್ಗೊಂಡು ಎಲ್ಲಾ 39 ಬಿಂಬಗಳಿಗೆ ಅಧಿವಾಸ ಪೂಜೆ, ಹೋಮ ಹವನಗಳು, ಸಂಜೆ ಕಲಶ ಪ್ರತಿಷ್ಠೆ, ಬ್ರಹ್ಮಕುಂಭ ಪ್ರತಿಷ್ಠೆ ನಡೆಯಲಿದೆ. 24ರಂದು ಬೆಳಿಗೆ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಭದ್ರಮಹಾಕಾಳಿ ದೇವಿಯ ರಕ್ತಚಂದನದ ದಾರು ಬಿಂಬ ಪ್ರತಿಷ್ಠಾಪನೆ, ಜೀವಕುಂಭ ಅಭಿಷೇಕ, ಬ್ರಹ್ಮಕುಂಭಾಭಿಷೇಕ, ಅಮ್ಮನವರ ದರ್ಶನ, ಮಹಾ ಅನ್ನಸಂತರ್ಪಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಆಡಳಿತ ಸಮಿತಿ ಅಧ್ಯಕ್ಷ ಕೆ.ಆನಂದ ಶೆಟ್ಟಿ, ಉಪಾಧ್ಯಕ್ಷ ಬಿ.ಸೀತಾರಾಮ ಶೆಟ್ಟಿ, ಗೌರವಾಧ್ಯಕ್ಷ ಕೆ.ಗೋಪಾಲ ಪೂಜಾರಿ, ಮೊಕ್ತೇಸರ ಬಿ.ವಿಠಲ ಶೆಟ್ಟಿ, ಸುಬ್ಬಣ್ಣ ಶೆಟ್ಟಿ, ಬಿ.ಭಾಸ್ಕರ ಶೆಟ್ಟಿ, ಶೇಖರ ಬಳೆಗಾರ್, ಕಾರ್ಯದರ್ಶಿ ಚಂದ್ರ ನಾಯ್ಕ್, ನಾಗಯ್ಯ ಶೆಟ್ರಮನೆ, ವಾಸ ಶೆಟ್ರಮನೆ ಹಾಗೂ ಹೆಗ್ಡೆಯವರ ಮನೆ ಕುಟುಂಬಸ್ಥರು ಮತ್ತು ಜೋಗಿ ಕುಟುಂಬಸ್ಥರು, ಪಾತ್ರಿಗಳು, ಅರ್ಚಕರು, ಆಡಳಿತ ಹಾಗೂ ಉತ್ಸವ ಸಮಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.











