ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಟೀಮ್ ಅಂಪಾರು ಒಂದು ಶ್ರೇಷ್ಠ ಕಾರ್ಯಕ್ಕೆ ಕೈ ಇಟ್ಟಿದೆ. ಹಕ್ಕಿಗಾದರೂ ಒಂದು ಗೂಡು ಬೇಕು. ಹಾವು ಇಲಿಗಾದರೂ ಬಿಲ ಬೇಕು. ಮನುಷ್ಯನಾಗಿ ಜನ್ಮವೆತ್ತವನಿಗೆ ಆಶನ- ವಸನ- ವಸತಿ ಈ ಮೂರು ಮೂಲಭೂತವಾಗಿ ಬೇಕೆ ಬೇಕು. ಅದರಿಂದಲೂ ವಂಚಿತರಾದವರಿಗೆ ಉದಾರಿಗಳು ಉದಾತ್ತ ಹೃದಯರೂ ಒದಗಿಸಬೇಕು. ಸಾಮಾಜಿವಾಗಿ ಕೆಳಸ್ತರದ ಮತ್ತು ಬಡತನದಿಂದ ನಲುಗಿರುವ, ಇವತ್ತಿಗೂ ಕನಿಷ್ಠ ಸೌಲಭ್ಯ ಇಲ್ಲದ ಗುಡಿಸಲಿನಲ್ಲಿ ಬದುಕುತ್ತಿರುವ ಕೊರಗ ಕುಟುಂಬಕ್ಕೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಹೆಜ್ಜೆ ಇಟ್ಟಿದ್ದೇವೆ ಎಂದು ಟೀಂ ಅಂಪಾರು ತಂಡದ ಅಧ್ಯಕ್ಷ ನವೀನ್ ಶೆಟ್ಟಿ ಹೇಳಿದರು.
ಅವರು ಅಂಪಾರಿನಲ್ಲಿ ಇರುವ ಏಕೈಕ ಕೊರಗ ಕುಟುಂಬವಾದ ಮಂಗಳಿ ಮತ್ತು ನರಸಿಂಹ ಕೊರಗ ದಂಪತಿಗಳಿಗೆ ನೂತನವಾಗಿ ನಿರ್ಮಿಸಲಾಗುತ್ತಿರುವ ಮನೆಯೊಂದರ ಶಿಲಾನ್ಯಾಸ, ಕೆಸರುಕಲ್ಲು ಮುಹೂರ್ತ ಸಂದರ್ಭ ಮಾತನಾಡಿದರು.
ಕೊರಗ ಕುಟುಂಬದ ಮನೆ ನಿರ್ಮಾಣದ ನೇತೃತ್ವ ವಹಿಸಿದ ಸಾಮಾಜಿಕ ಕಾರ್ಯಕರ್ತ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಮಾತನಾಡಿ, ನಮ್ಮ ಊರಿನಲ್ಲಿರುವ ಏಕೈಕ ಕೊರಗ ಕುಟುಂಬ. ಸ್ವಂತ ಸೂರಿಲ್ಲದ ಈ ಕುಟುಂಬ ನಮ್ಮೂರಿನ ದೇವರ ಚಾಕರಿ ಮಾಡುತ್ತದೆ. ಈ ನಿಟ್ಟಿನಲ್ಲಿ ಮನೆ ಕಟ್ಟಿಕೊಡಲು ಟೀಂ ಅಂಪಾರು ಮೂಲಕ ಮುಂದಾಗಿದ್ದೇವೆ. ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಹೆಚ್ಚುವರಿ ಹಣವನ್ನು ಹಾಕಿ ಸುಂದರ ಮನೆ ಕಟ್ಟಿಕೊಡಲು ತೀರ್ಮಾನಿಸಿದ್ದೇವೆ ಎಂದರು.
ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ನೂತನ ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಮಾತನಾಡಿ. ಟೀಂ ಅಂಪಾರು ಸಾಮಾಜಿಕ ಕೆಲಸಗಳಲ್ಲಿ ಮುಮಚೂಣಿಯಲ್ಲಿ ಸಾಗುತ್ತಿದೆ. ತಂಡದ ಸಮಾಜಸೇವೆಗೆ ನಾವೆಲ್ಲರೂ ಪ್ರಾಮಾಣಿಕವಾಗಿ ಕೈಜೋಡಿಸಬೇಕು ಎಂದರು. ಫಲಾನುಭವಿ ನರಸಿಂಹ ಕೊರಗ ಮಾತನಾಡಿ, ಇಷ್ಟು ದಿನ ಕತ್ತಲಲ್ಲಿಯೇ ಬದುಕುತ್ತಿದ್ದೆವು. ಮೂರು ತಿಂಗಳ ಒಳಗೆ ಮನೆ ಕಟ್ಟಿಕೊಡುವ ಭರವಸೆ ನೀಡಿರುವುದು ಬದುಕಿಗೆ ನೆಮ್ಮದಿ ತಂದಿದೆ ಎಂದರು.
ಅಂಪಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಕಿಣಿ, ಉಪಾಧ್ಯೆಕ್ಷೆ ವನಜ ಸಂಜೀವ ಮೊಗವೀರ, ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ನೂತನ ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ, ಅಂಪಾರು ರೋಟರಿ ಕ್ಲಬ್ ಅಧ್ಯಕ್ಷ ದಿನೇಶ್ ಗೊರಟೆ, ಅಂಪಾರು ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಬಲಾಡಿ, ಗ್ರಾ.ಪಂ. ಸದಸ್ಯರಾದ ಗಣೇಶ್ ಮೊಗವೀರ, ಭಾರತಿ ಶೆಟ್ಟಿ, ಚಂದ್ರಹಾಸ ಅಂಪಾರು, ನೂತನ್ ಆನಂದ್ ಶೆಟ್ಟಿ, ಟೀಂ ಅಂಪಾರು ಸದಸ್ಯರು ಉಪಸ್ಥಿತರಿದ್ದರು.











