ಕುಂದಾಪುರ ಮಿರರ್ ಸುದ್ದಿ…

ಅಂಪಾರು :ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ಅಂಪಾರು ಇವರ ನೇತೃತ್ವದಲ್ಲಿ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಂಜಯ ಗಾಂಧಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇವರ ಸಹಭಾಗಿತ್ವದಲ್ಲಿ ಜಂಟಿಯಾಗಿ ವಿದ್ಯಾದಾಯಿನಿ ಸಭಾಂಗಣದಲ್ಲಿ “ಮಾತೃ ವಂದನಾ” ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ವಿಶಿಷ್ಟವಾಗಿ ಆಚರಿಸಲಾಯಿತು.
ಮಾತೃ ವಂದನಾ ಎನ್ನುವ ಈ ಅಪೂರ್ವ ಕಾರ್ಯಕ್ರಮ ಅತ್ಯದ್ಭುತ ಯಶಸ್ಸು ಕಂಡು, ಪೋಷಕರು ಹಾಗೂ ವಿದ್ಯಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು.
ಜನಪ್ರಿಯ ವಾಗ್ಮಿ, ಚಿಂತಕರಾದ ದಾಮೋದರ ಶರ್ಮ ಇವರು ಮಾತೃ ವಂದನಾ ಕಾರ್ಯಕ್ರಮದ ಮೂಲಕ ಪೋಷಕರಿಗೆ ಮತ್ತು ಮಕ್ಕಳಿಗೆ ಸುಂದರ ಅನುಭೂತಿ ಮಾಡಿಸಿ, ಭಾವನಾತ್ಮಕವಾಗಿ ಮಗು ಮತ್ತು ಹೆತ್ತವರ ಸಂಬಂಧ ಗಟ್ಟಿಗೊಳಿಸುವ, ಗೌರವಿಸುವ ತನ್ಮೂಲಕ ಪ್ರೀತಿಯ ಒರತೆ ಚಿಮ್ಮುವಂತೆ ತಮ್ಮ ಮಾತುಗಳಿಂದ ಪ್ರೇರೇಪಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಸೇವಕರು, ಪ್ರಗತಿಪರ ಕೃಷಿಕರು ಆದ ಭಾಸ್ಕರ್ ಶೆಟ್ಟಿ ಜಾಂಬ್ಳಿ ಇವರು ನೆರವೇರಿಸಿ ಶುಭಹಾರೈಸಿದರೆ, ವಿಶೇಷ ಆಹ್ವಾನಿತರಾಗಿ ಆಗಮಿಸಿದ, ಅಂಪಾರು ಸಿ ಎ ಬ್ಯಾಂಕ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಇವರು ಶುಭಶಂಸನೆಗೈದರು.
ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಮಾತನಾಡಿ ಸಂಸ್ಥೆಯು ಮುಂದೆಯೂ ಇಂತಹ ಹಲವು ಕಾರ್ಯಕ್ರಮಗಳನ್ನು ಉತ್ತಮ ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣವನ್ನು ನೀಡಲು ಬದ್ದವಾಗಿದೆ ಎಂದರು.
ಸಂಜಯಗಾಂಧಿ ಫಂಡ್ ಕಮಿಟಿ ಅಧ್ಯಕ್ಷೆ ಶ್ರೀಮತಿ ಶಾರದಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ನವೀನ್ ಕುಮಾರ್ ಶೆಟ್ಟಿ ಶಾನ್ಕಟ್ಟು ಸ್ವಾಗತಿಸಿದರು. ಖಜಾಂಚಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಚೈತ್ರ ಯಡಿಯಾಳ ನಿರೂಪಿಸಿದರು. ಉದಯಕುಮಾರ್ ವಂದಿಸಿದರು.











