ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಾರ್ಥಿಗಳ ಮೇಲೆ ನಡೆದ ಕ್ರೂರ ದಾಳಿಗೆ, ವಿಶ್ವವೇ ಮೆಚ್ಚುವ ರೀತಿಯಲ್ಲಿ ಪ್ರತಿಕಾರ ತೀರಿಸಿಕೊಂಡಿರುವ ಹೆಮ್ಮೆಯ ಭಾರತೀಯ ಸೈನಿಕರಿಗೆ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅಭಿನಂದನೆ ಸಲ್ಲಿಸಿದ್ದಾರೆ.
ಮಾಧ್ಯಮ ಪ್ರಕಟಣೆಯಲ್ಲಿ ಅವರು ವಿದೇಶಿ ಉಗ್ರವಾದಿಗಳು ಭಾರತದ ಮೇಲೆ ನಡೆಸುತ್ತಿರುವ ಕುತಂತ್ರಗಳಿಗೆ ಭಾರತ ಸರಿಯಾದ ರೀತಿಯಲ್ಲಿ ಉತ್ತರ ನೀಡಬೇಕು ಎನ್ನುವ ಕೋಟ್ಯಂತರ ಭಾರತೀಯರ ಒತ್ತಾಸೆಯಾಗಿತ್ತು. ಇದೀಗ ಅದಕ್ಕೆ ಪೂರಕವಾಗಿ ಮೂರು ಸೇನಾಪಡೆಗಳ ಸಮನ್ವಯದಿಂದ ಮಂಗಳವಾರ ನಡುರಾತ್ರಿ ಭಾರತದ ಸೈನ್ಯ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ, ಉಗ್ರವಾದಿಗಳು ಹಾಗೂ ಉಗ್ರವಾದಿಗಳನ್ನು ಬೆಂಬಲಿಸುವವರಿಗೆ ತಕ್ಕ ಉತ್ತರ ನೀಡಿದೆ ಎಂದಿದ್ದಾರೆ.
ಭಯೋತ್ಪಾದಕರು ಹಾಗೂ ಉಗ್ರವಾದಿಗಳ ನಿಗ್ರಹಕ್ಕಾಗಿ ನಡೆಯುತ್ತಿರುವ ಕಾರ್ಯಾಚರಣೆಯ ಈ ಸಂದಿಗ್ಧ ಕಾಲದಲ್ಲಿ ದೇಶವಾಸಿಗಳಾದ ನಾವೆಲ್ಲ ಒಟ್ಟಾಗಿರಬೇಕು ಹಾಗೂ ನಮ್ಮನ್ನು ರಕ್ಷಣೆ ಮಾಡುವ ಸೈನಿಕರಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











