ಗುಡೇದೇವಸ್ಥಾನ ಏತ ನೀರಾವರಿ ಅವೈಜ್ಞಾನಿಕ ಕಾಮಗಾರಿ: ಜಾಕ್ವೆಲ್ ಸ್ಥಳಾಂತರಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ – ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಶಾಮೀಲು – ಅಧಿಕಾರಿಗಾಗಿ ಭಿಕ್ಷೆ ಎತ್ತಿದ ಪ್ರತಿಭಟನಕಾರರು – ತಹಶೀಲ್ದಾರರಿಗೆ ಖಾಲಿ ಕೊಡಪಾನ ನೀಡಿ ಆಕ್ರೋಶ

0
622

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬೈಂದೂರು :ಖಂಬದಕೋಣೆ ಗ್ರಾ.ಪಂ. ವ್ಯಾಪ್ತಿಯ ಗುಡೇದೇವಸ್ಥಾನ ಏತ ನೀರಾವರಿ ರೂ.72 ಕೋಟಿ ಯೋಜನೆಯನ್ನು ಹಳಗೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನಾನುಕೂಲವಾಗುವಂತೆ ಮಾರ್ಪಡಿಸಿದ ಅಧಿಕಾರಿಗಳ ಮೇಲೆ ಶಿಸ್ತುಕ್ರಮವಾಗಬೇಕು, ಹಾಗೂ ಜಾಕ್ವೆಲ್ ಅನ್ನು ಸ್ಥಳಾಂತರಿಸಿ ಈ ಯೋಜನೆ ರೈತರಿಗೆ ಅನುಕೂಲವಾಗುವಂತೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಶ್ರೀ ಗುಡೇದೇವಸ್ಥಾನ ಏತನೀರಾವರಿ ಸಂತ್ರಸ್ತ ರೈತರ ಒಕ್ಕೂಟ-ಹೇರಂಜಾಲು, ಹಳಗೇರಿ, ನೂಜಾಡಿ ವತಿಯಿಂದ ಬೃಹತ್ ಪ್ರತಿಭಟನೆ ಶುಕ್ರವಾರ ನಡೆಯಿತು.

ಚಲೋ ಬೈಂದೂರು ಪ್ರತಿಭಟನಾ ಮೆರವಣಿಗೆಯಲ್ಲಿ ಖಾಲಿ ಕೊಡಪಾನವನ್ನು ಪ್ರದರ್ಶಿಸಲಾಯಿತು. ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತ ಪಡಿಸಲಾಯಿತು. ಶಂಖನಾದ ಮೊಳಗಿಸಲಾಯಿತು. ಮೆರವಣಿಗೆಯಲ್ಲಿ ಸಾಗಿಬಂದ ರೈತರು, ಐದು ಗ್ರಾಮದ ಗ್ರಾಮಸ್ಥರು ತಾಲೂಕು ಆಡಳಿತ ಸೌಧದ ಎದುರು ಜಮಾಯಿಸಿದರು.

Click Here

ಅಧಿಕಾರಿಗಾಗಿ ಭಿಕ್ಷೆ ಎತ್ತಿದರು:
ಸಂಬಂಧಪಟ್ಟ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು, ಇಂಜಿನಿಯರ್ ಬಗ್ಗೆ ಕೆಂಡಾಮಂಡಲರಾದ ಪ್ರತಿಭಟನಾನಿರತರು, ಅವೈಜ್ಞಾನಿಕ ಕಾಮಗಾರಿ ನಡೆಯುವುದನ್ನು ತಡೆಯುವಲ್ಲಿ ವಿಫಲರಾದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು. ಸ್ಥಳದಲ್ಲಿ ಭಿಕ್ಷೆ ಪಾತ್ರೆ ಹಿಡಿದು ನೆರೆದ ಪ್ರತಿಭಟನಾಕಾರರಿಂದ ಭೀಕ್ಷೆ ಸಂಗ್ರಹಿಸಿ ಅದನ್ನು ತಹಶೀಲ್ದಾರ್ ಮೂಲಕ ಅಧಿಕಾರಿಗೆ ನೀಡಲಾಯಿತು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿ ರೈತ ಮುಖಂಡರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ರೂ.72 ಕೋಟಿಯ ಈ ಏತನೀರಾವರಿ ಯೋಜನೆ ಸಾಕಷ್ಟು ಲೋಪಗಳು ಆಗಿವೆ. ಸರಕಾರದ ನಡಾವಳಿಯನ್ನು ಉಲ್ಲಂಘಿಸಿ ಜಾಕ್ವೆಲ್ ಬಿಂದುವನ್ನು ಸ್ಥಳೀಯ ಸಣ್ಣ ನೀರಾವರಿ ಇಲಾಖೆಯ ಅಭೀಯಂತರರು ಜಾಕ್ವೆಲ್ ಬಿಂದುವನ್ನು ಹಳಗೇರಿ ವೆಂಟೆಡ್ ಡ್ಯಾಮಿನ ಒಳಗಡೆ ಮಾಡಿ ರೈತರಿಗೆ ಸಂಕಷ್ಟ ತಂದೊಡ್ಡಿದ್ದಾರೆ. ಹಾಗಾಗಿ ಈ ಇಂಜಿನಿಯರರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶ ಮಾಡಬೇಕು, ಹಾಗೂ ಈ ಅವೈಜ್ಞಾನಿಕ ಯೋಜನೆಯು ಸುಮಾರು 3 ಕಿ.ಮೀನಷ್ಟು ಹಿನ್ನೀರಿನ ಹೊಳೆ ದಂಡೆಯನ್ನು ಕಟ್ಟಿ ಎತ್ತರಿಸಿ ಕಟ್ಟಿನ ನೀರನ್ನು ಸಂಗ್ರಹಿಸಿದಾಗ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೇ ಬೆಳೆಯಾದ ಶೇಂಗ, ಕಲ್ಲಂಗಡಿ ಮತ್ತು ಅಡಿಕೆ ತೋಟಗಳಿಗೆ ಅಪಾರ ಹಾನಿಯಾಗುತ್ತದೆ ಎಂದರು.
ಸಿ.ಆರ್.ಝೆಡ್ ವ್ಯಾಪ್ತಿಯಲ್ಲಿ ಈ ಡ್ಯಾಮ್ ಬರುತ್ತದೆ. ಅದಕ್ಕೆ ಅನುಮತಿ ಪಡೆದುಕೊಂಡಿಲ್ಲ. ಇಂಥಹ ಅನೇಕ ಲೋಪಗಳು ಇದೆ. ಭೂಸ್ವಾಧೀನ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. 72 ಕೋಟಿಯ ಯೋಜನೆ ಇಲ್ಲಿ ಪ್ರಗತಿಯಲ್ಲಿದ್ದರೂ ಒಂದು ಫಲಕ ಅಳವಡಿಸಲಾಗಿಲ್ಲ. ದುರ್ದೈವೆಂದರೆ ಈ ಯೋಜನೆಗೆ ಅಪ್ಪ ಯಾರು ಎನ್ನುವುದೇ ಗೊತ್ತಿಲ್ಲ. ರೈತರ ಅನುಕೂಲಕ್ಕಾಗಿ ಸರಕಾರ ಯೋಜನೆಗಳನ್ನು ರೂಪಿಸಿದರೆ ಅದನ್ನು ಸಮರ್ಪಕವಾಗಿ ಅನುಷ್ಟಾನ ಮಾಡಬೇಕಾದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ವೈಫಲ್ಯದಿಂದ ವ್ಯರ್ಥವಾಗುತ್ತಿದೆ, ಈ ಯೋಜನೆಯ ಫಲಾನುಭವಿಗಳು ಯಾವೊಬ್ಬ ರೈತರು ಅಲ್ಲ, ಇದರ ಫಲಾನುಭವಿಗಳು ಕೆಲವೊಂದು ಚುನಾಯಿತ ಪ್ರತಿನಿಧಿಗಳು. ಕಳೆದ ಮೂರು ವರ್ಷಗಳಲ್ಲಿ ಎಡಮಾವಿನ ಹೊಳೆಗೆ 18 ಕೋಟಿಯಲ್ಲಿ ಕಟ್ಟುಗಳು ಆಗಿವೆ. ಅದರ ಒತೆಯಲ್ಲಿ 72 ಕೋಟಿಯ ಏತನೀರಾವರಿ ಯೋಜನೆಯ ಕಥೆಯಾದರೆ, ಸುಬ್ಬರಡಿಯಲ್ಲಿ 56 ಕೋಟಿ ಖರ್ಚು ಮಾಡಿ ಇವತ್ತು ಉಪ್ಪು ನೀರು ಆಗುತ್ತಿದೆ. ಇದಕ್ಕೆ ಕಾರಣರಾದವರ ಮೇಲೆ ಕ್ರಮವಾಗುತ್ತಿಲ್ಲ. ರೈತರು ಪ್ರಶ್ನೆ ಮಾಡುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ಸುಮ್ಮನಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಇದೇ ಏತನೀರಾವರಿ ಯೋಜನೆ ವಿಚಾರದಲ್ಲಿ ರೈತರ ಸಭೆ ನಡೆದಾಗ ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿಯೇ ಹಲ್ಲೆಯಾಗುತ್ತದೆ. ಈ ಬಗ್ಗೆ ಯಾವ ಚುನಾಯಿತ ಪ್ರತಿನಿಧಿಯೂ ಮಾತನಾಡಲಿಲ್ಲ ಎಂದರು.

ಉಡುಪಿ ಜಿಲ್ಲಾ ರೈತ ಸಂಘದ ವಂಡ್ಸೆ ವಲಯ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲಾ ರೈತ ಸಂಘ ಕಳೆದ 12 ವರ್ಷದಿಂದ ರೈತ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದನೆ ಮಾಡದಿರುವುದನ್ನು ಕಾಣುತ್ತಿದ್ದೇವೆ. ಸರಕಾರದ ಮಹತ್ವಕಾಂಕ್ಷಿ ಯೋಜನೆಗಳು, ಸರಕಾರದ ಅನುದಾನ ಅಧಿಕಾರಿಗಳ ಬೇಜಬ್ದಾರಿ, ನಿರ್ಲಕ್ಷ್ಯದಿಂದ ಪ್ರಯೋಜನವಿಲ್ಲದಂತಾಗುತ್ತದೆ. ಈ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಇಲ್ಲಿನ ರೈತರ ಹೋರಾಟಕ್ಕೆ ನ್ಯಾಯ ಸಿಗಲೇಬೇಕು, ರೈತರ ನ್ಯಾಯಯುತ ಹೋರಾಟಕ್ಕೆ ಉಡುಪಿ ಜಿಲ್ಲಾ ರೈತ ಸಂಘ ಸದಾ ಜೊತೆರುತ್ತದೆ ಎಂದರು.
ರೈತ ಸಂಘದ ಅಧ್ಯಕ್ಷ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ, ಶ್ರೀ ಗುಡೇದೇವಸ್ಥಾನ ಏತ ನೀರಾವರಿ ಸಂತ್ರಸ್ತ ರೈತರ ಒಕ್ಕೂಟದ ಅಧ್ಯಕ್ಷೆ ಜಯಂತಿ ಎನ್ ಐತಾಳ್ ಹೇರಂಜಾಲು, ಉಡುಪಿ ಜಿಲ್ಲಾ ರೈತ ಸಂಘದ ತ್ರಾಸಿ ವಲಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಗ್ಯಾರಂಟಿ ಸಮಿತಿಯ ಮೋಹನ ಪೂಜಾರಿ, ಸುಬ್ರಹ್ಮಣ್ಯ ಬಿಜೂರು, ರಾಘವೇಂದ್ರ ಹೇರಂಜಾಲು, ವೇದ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.

ಯೋಜನೆ ವೈಫಲ್ಯದ ಬಗ್ಗೆ ಮಕ್ಕಳು ಬೀದಿನಾಟಕ ಪ್ರದರ್ಶಿಸಿದರು. ತಹಶೀಲ್ದಾರ ಭೀಮಸೇನ್ ಕುಲಕರ್ಣಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Click Here

LEAVE A REPLY

Please enter your comment!
Please enter your name here