ಕಸ ಎಸೆಯುವ ಕೈಗಳ ಬಗ್ಗೆ ನಿರ್ದಾಕ್ಷಿಣಿಯ ಕ್ರಮ ಅಗತ್ಯ – ಪ್ರಕಾಶ್ ಹಂದಟ್ಟು

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಸ ಎಸೆಯುವ ಕೈಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಆಗ ಮಾತ್ರ ಎಸೆಯುವ ಮನಸ್ಥಿತಿ ಕ್ಷೀಣಿಸುತ್ತದೆ ಎಂದು ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ಪ್ರಕಾಶ್ ಹಂದಟ್ಟು ಹೇಳಿದರು.
ಭಾನುವಾರ ಕೋಟತಟ್ಟುವಿನ ಹಂದಟ್ಟಿನ ಸೀತಾನದಿ ತಟದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ,ಜೆಸಿಐ ಸಿನಿಯರ್ ಲಿಜನ್ ಕೋಟ,ಕೋಟತಟ್ಟು ಗ್ರಾಮಪಂಚಾಯತ್, ಗೆಳೆಯರ ಬಳಗ ಹಂದಟ್ಟು ಸಹಯೋಗದೊಂದಿಗೆ 255ನೇ ಭಾನುವಾರದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿ ತ್ಯಾಜ್ಯದ ಕೊಂಪೆ ದಿನದಿಂದ ದಿನಕ್ಕೆ ವಿಸ್ತರಿಸಿಕೊಳ್ಳುತ್ತದೆ. ಒಂದಿಷ್ಟು ಪಂಚವರ್ಣದಂತಹ ಸಂಸ್ಥೆಗಳು ಪರಿಸರ ಕಾಳಜಿ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿಸಿಕೊಳ್ಳುತ್ತಿವೆ. ಆದರೆ ಎಸೆಯುವ ಕೊಳಕು ಮನಸ್ಥಿತಿ ಅಂತ್ಯವಾಗಿಲ್ಲ. ಈ ಬಗ್ಗೆ ಸ್ಥಳೀಯಾಡಳಿತ ಬ್ಲ್ಯಾಕ್ ಸ್ಪಾಟ್ ಪ್ರದೇಶಗಳಲ್ಲಿ ಸಿಸಿ ಕ್ಯಾಮರ ಅಳವಡಿಸಲಿದೆ. ಸ್ವಚ್ಛ ಪರಿಸರದ ಕಲ್ಪನೆ ಮನೆ ಮನೆಯಲ್ಲಿ ಮೊಳಗಬೇಕು. ಆಗ ಮಾತ್ರ ಪರಿಸರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದಂತೆ ಎಂದು ಪಂಚವರ್ಣದ ನಿರಂತರ ಸ್ವಚ್ಛತಾ ಕಾರ್ಯವನ್ನು ಪ್ರಶಂಸಿದರು.
ಇದೇ ವೇಳೆ ಸುಮಾರು 40ಕ್ಕೂ ಅಧಿಕ ಚೀಲ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ, ಸ್ಥಾಪಕಾಧ್ಯಕ್ಷೆ ಪುಷ್ಭ ಕೆ ,ಜೆಸಿಐ ಕೋಟ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್ ಕೋಟ ಮತ್ತಿತರರು ಉಪಸ್ಥಿತರಿದ್ದರು.
ಪಂಚವರ್ಣ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು. ಗೀತಾನಂದ ಫೌಂಡೇಶನ್ ಸಹಕಾರ ನೀಡಿತು.











