ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಮುಂಬರುವ ಫೆಬ್ರವರಿ 10 ರಿಂದ 17 ರವರೆಗೆ ನಡೆಸಲು ಉದ್ದೇಶಿಸಲಾಗಿರುವ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಮತ್ತು ವಿಶೇಷ ಶ್ರೀಮನ್ಮಹಾರಥೋತ್ಸವದ ಬಗ್ಗೆ ಸಮಾಲೋಚನಾ ಸಭೆ ದೇವಳ ವಠಾರದಲ್ಲಿ ಮಂಗಳವಾರ ಸಂಜೆ ನಡೆಯಿತು.









ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಸಭೆಯನ್ನುದ್ದೇಶಿಸಿ ಮಾತನಾಡಿ, ಎರಡು ವರ್ಷಗಳ ಹಿಂದೆಯೇ ನಡೆಯಬೇಕಿದ್ದ ಈ ಸಮಾರಂಭ ಕೊರೊನಾ ಕಾರಣದಿಂದ ಇದೀಗ ನಡೆಯುತ್ತಿದೆ. ಕೋಟಿಲಿಂಗೇಶ್ವರನಿಗೆ ಇದೇ ಪ್ರಶಸ್ತ ಕಾಲ ಎಂಬುದು ಇದರರ್ಥ. ನೂತನ ಧ್ವಜ ಸ್ತಂಭ ಸ್ಥಾಪನೆ ಮತ್ತು ಬ್ರಹ್ಮ ಕಲಶ ನೆರವೇರಿಸಿದರೆ ವಿಶೇಷ ರಥೋತ್ಸವವೂ ಆಗಬೇಕು ಎಂಬುದು ಶಾಸ್ತ್ರ. ಅದರಂತೆ ಈ ಸಮಾರಂಭಗಳನ್ನು ಎಲ್ಲ ಧಾರ್ಮಿಕ ಮತ್ತು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳಿಸಲು ಯೋಜಿಸಲಾಗಿದೆ. ಇದೊಂದು ಜೀವಮಾನದ ಸುವರ್ಣಾವಕಾಶ. ಕೋಟೇಶ್ವರ ಮತ್ತು 14 ಗ್ರಾಮಗಳ ಮೂಲದವರು ದೇಶ-ವಿದೇಶಗಳಲ್ಲೂ ಉಚ್ಚ್ರಾಯ ಸ್ಥಿತಿಗೆ ಬರಲು ಕೋಟಿಲಿಂಗೇಶ್ವರನ ಕೃಪೆಯೇ ಕಾರಣ. ಈ ಸುಸಂದರ್ಭದಲ್ಲಿ ನಾವೆಲ್ಲ ಒಂದಾಗಿ ಆತನಿಗೆ ನಮ್ಮ ಸೇವೆಯ ಮೂಲಕ ಕೃತಜ್ಞತೆ ಸಲ್ಲಿಸಲು ಇದೊಂದು ಸದವಕಾಶ. ಆದ್ದರಿಂದ ಈ ಯೋಜಿತ ಉತ್ಸವಗಳು ಸರ್ವಾಂಗ ಸುಂದರವಾಗಿ, ಯಾವ ಲೋಪಗಳೂ ಬಾರದಂತೆ, ಮುಂದಿನ ತಲೆಮಾರಿನವರೂ ಸ್ಮರಿಸಿಕೊಳ್ಳುವಂತೆ ಯಶಸ್ವಿಗೊಳಿಸುವುದು ಭಕ್ತರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕೋರೋನಾ ನಿಯಮಾವಳಿಗಳನ್ನು ಚಾಚೂತಪ್ಪದೇ ಪಾಲಿಸಿಕೊಂಡು ಕಾರ್ಯಕ್ರಮ ನೆಡೆಸಬೇಕಾಗಿದೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಇಲ್ಲಿ ಪ್ರತಿಯೊಬ್ಬರ ಸೇವಯೂ ಕೂಡಾ ಅಮೂಲ್ಯವಾಗುತ್ತದೆ. ಕರಸೇವಕರು, ಸ್ವಯಂಸೇವಕರ ಸೇವೆ ಅತ್ಯಮೂಲ್ಯವಾಗಿದೆ. ಹಾಗಾಗಿ ರಚಿಸಲಾಗುವ ಸಮಿತಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ದೇವರ ಕ್ರಪೆಗೆ ಪಾತ್ರರಾಗಬೇಕು ಎಂದರು.
ಇದು ಅಪರೂಪಕ್ಕೆ ದೊರೆಯುವ ಅವಕಾಶವಾದ್ದರಿಂದ ದೇವಳದ ವ್ಯಾಪ್ತಿಗೆ ಒಳಪಡುವ 14 ಗ್ರಾಮಗಳ ಭಕ್ತಾಧಿಗಳು ಕೂಡಾ ಸೇವೆ ಸಲ್ಲಿಸಲು ಅವಕಾಶವಿದೆ. ತೀರ್ಥ ಪ್ರಸಾದ ಕಲಸ ರೂ.1005, ಅಷ್ಟಲಕ್ಷ್ಮೀ ಕಲಶ ರೂ.5005,ಬೆಳ್ಳಿ ಕಲಶ ರೂ.30000 ಆಗಿದೆ ಎಂದರು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ದೇವಸ್ಥಾಣದ ತಂತ್ರಿಗಳು, ಅರ್ಚಕರಾದ ಪ್ರಸನ್ನ ಕುಮಾರ ಐತಾಳ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ , ಕಾರ್ಯನಿರ್ವಹಣಾಧಿಕಾರಿ ಗಣೇಶ ಗೌಡ, ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಬೆಟ್ಟಿನ್ ಉಪಸ್ಥಿತರಿದ್ದರು.
ಉದ್ಯಮಿ ರಾಘವೇಂದ್ರ ರಾವ್ ನೇರಂಬಳ್ಳಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಮುಖ್ಯಸ್ಥರಾದ ಶ್ರೀಧರ ಕಾಮತ್, ಮಲ್ಯಾಡಿ ಶಿವರಾಮ ಶೆಟ್ಟಿ ಮೊದಲಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
Video:











