ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ರಾಜಕೀಯ ಪಕ್ಷಗಳ ಒತ್ತಡದಿಂದ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಸರಕಾರಿ ಅಧಿಕಾರಿಗಳು ಸಂವಿಧಾನಬದ್ಧವಾಗಿ ಕೆಲಸ ಮಾಡಬೇಕು, ಯಾರದ್ದೋ ಒತ್ತಡಕ್ಕೆ ಒಳಗಾಗಿ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿದರೆ ಉಡುಪಿ ಜಿಲ್ಲೆಯಲ್ಲಿ ಅದು ಹೆಚ್ಚುದಿನ ಉಳಿಯುವುದಿಲ್ಲ. ಪ್ರಾಮಾಣಿಕವಾಗಿ, ಕಾನೂನುಬದ್ದವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಸದಾ ಬಿಜೆಪಿಯ ಬೆಂಬಲವಿದೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಹೇಳಿದರು.
ಶಂಕರನಾರಾಯಣ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಆದೇಶ ಮಾಡಿರುವ ವಿರುದ್ಧ ಹಾಗೂ ಕೋಟ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕಿ ಉಮಾ ಗಾಣಿಗ ಅವರ ಸ್ಥಾನ ಅನೂರ್ಜಿತಗೊಳಿಸುವಂತೆ ಆದೇಶದ ವಿರುದ್ದ ಬಿಜೆಪಿ ಬೈಂದೂರು ಹಾಗೂ ಕುಂದಾಪುರ ಮಂಡಲದ ವತಿಯಿಂದ ಕುಂದಾಪುರದ ಸಹಾಯಕ ನಿಬಂಧಕರ ಕಛೇರಿ ಎದುರು ಪ್ರತಿಭಟನೆ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಈ ಎರಡು ಘಟನೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕುಂದಾಪುರ ಮಂಡಲದ ಮಾಜಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿ ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಜನವರಿ 19ಕ್ಕೆ ಚುನಾವಣೆ ನಡೆದಿದ್ದು ಉಮಾ ಗಾಣಿಗ ಅವರು ಒಂದು ಮತದಿಂದ ವಿಜೇತರಾಗಿದ್ದು, ಸೋತ ಅಭ್ಯರ್ಥಿ ಮರು ಎಣಿಕೆ ಮಾಡಬೇಕೆಂದು ಕುಂದಾಪುರ ಎ.ಆರ್ ಕೋರ್ಟ್ ನಲ್ಲಿ ದಾವೆ ದಾಖಲಿಸಿದ್ದು, ಈ ಮರು ಎಣಿಕೆ ನಡೆಯುವ ಮೊದಲೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಕನ್ಯಾ ಅವರು ಉಮಾ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡಿ ಆದೇಶ ಮಾಡಿರುವುದು ಖಂಡನಾರ್ಯ. ಸುಕಾನ್ಯಾ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇವರ ಮೇಲೆ ಸಮಗ್ರ ತನಿಖೆ ನಡೆಯಬೇಕು. ಆಡಳಿತ ಪಕ್ಷಗಳ ಕೈಗೊಂಬೆಯಾಗದೆ ಅಧಿಕಾರಿಗಳು ಕೆಲಸ ಮಾಡುವಂತಾಗಬೇಕು ಎಂದರು.
ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ., ಬೈಂದೂರು ಮಂಡಲದ ನಿಕಟಪೂರ್ವ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕುಂದಾಪುರ ಮಂಡಲದ ಮಾಜಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಶಂಕರನಾರಾಯಣ ಹಾಲು ಉತ್ಪಾದಕರ ಸಹಕಾರ ಸಂಘ ಮಾಜಿ ಅಧ್ಯಕ್ಷ ಸುಧಾಕರ ಕುಲಾಲ್ ,ಬಿಜೆಪಿ ಮುಖಂಡರಾದ ಉಮೇಶ ಶೆಟ್ಟಿ ಕಲ್ಗದ್ದೆ, ಉಮಾ ಗಾಣಿಗ ಕೋಟ, ಕುಂದಾಪುರ ಮಂಡಲದ ಪ್ರಧಾನ ಕಾರ್ಯದರ್ಶಿ ಸತೀಶ ಪೂಜಾರಿ ವಡ್ಡರ್ಸೆ, ಸುದೀರ್ ಕೆ.ಎಸ್., ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಪಕ್ಷದ ಮುಖಂಡರು ಉಪಸ್ಥಿತರಿದ್ದರು.











