ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಪತ್ರಿಕೊದ್ಯಮ ಸಾಕಷ್ಟು ಬದಲಾವಣೆ, ಪ್ರಗತಿ ಸಾಧಿಸಿದೆ. ಹಿಂದೆ ಪತ್ರಕರ್ತನ ಮುಂದೆ ಸಾಕಷ್ಟು ಸವಾಲುಗಳಿದ್ದವು. ಇವತ್ತು ಆಧುನಿಕ ಜಗತ್ತು ಅವಕಾಶ, ಸೌಲಭ್ಯಗಳನ್ನು ಒದಗಿಸಿದೆ. ಪತ್ರಿಕೋದ್ಯಮ ಇವತ್ತು ವಿಫುಲವಾಗಿ ಬೆಳೆದಿದೆ. ಪತ್ರಿಕೋದ್ಯಮ ವ್ಯಾಸಂಗ ಮಾಡಿದರೆ ಬೇರೆ ಬೇರೆ ಅವಕಾಶಗಳು ಸೃಷ್ಟಿಯಾಗಿವೆ. ಇಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರ ಮಾತ್ರ ವಿದ್ಯಾರ್ಥಿಗಳ ಆದ್ಯತೆಯಾಗಿರದೆ ಪತ್ರಿಕೋದ್ಯಮವನ್ನು ಆರಿಸಿಕೊಂಡರೆ ಉತ್ತಮ ಭವಿಷ್ಯವಿದೆ. ಪರಿವರ್ತಿತ ಪತ್ರಿಕೋದ್ಯಮ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿಕೊಂಡಿದೆ ಎಂದು ಹಿರಿಯ ಪತ್ರಕರ್ತ ಡಾ.ಸುಧಾಕರ ನಂಬಿಯಾರ್ ಹೇಳಿದರು.
ಕುಂದಾಪುರ ಭಂಡಾರ್‍ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಆಂತರಿಕ ಗುಣಮಟ್ಟ ಭರವಸೆ ಕೋಶ, ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು, ಕಾರ್ಯನಿರತ ಪತ್ರಕರ್ತರ ಸಂಘ, ಕುಂದಾಪುರ ಇವರ ಸಹಯೋಗದೊಂದಿಗೆ ಭಂಡಾರ್‍ಕಾರ್ಸ್ ಕಾಲೇಜಿನಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ಪರಿವರ್ತಿತ ಪತ್ರಿಕೋದ್ಯಮ’ದ ಕುರಿತು ಉಪನ್ಯಾಸ ನೀಡಿದರು.
ಪತ್ರಿಕೋದ್ಯಮದಲ್ಲಿ ಓದುಗರ ಆಕರ್ಷಿಸುವ ಅಪಾರವಾದ ಅನುಭವ ಪತ್ರಕರ್ತರಲ್ಲಿ ಇರಬೇಕಾಗುತ್ತದೆ. ನಿರಂತರ ಕಲಿಕೆ, ಹಿರಿಯರ ಅನುಭವ ಪಡೆಯುವ ಮೂಲಕ ಅದನ್ನು ಸಿದ್ಧಿಸಿಕೊಳ್ಳಲು ಸಾಧ್ಯವಿದೆ. ವಿಷಯವೊಂದನ್ನು ಓದುಗರ ಮುಂದಿಡುವಲ್ಲಿ ಪತ್ರಕರ್ತನ ಬರಹದ ಕೌಶಲ್ಯವೂ ಅಡಗಿರುತ್ತದೆ. ನನ್ನ 30 ವರ್ಷಗಳ ಪತ್ರಿಕೋದ್ಯಮದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ ಎಂದರು.
ಭಂಡಾಕಾರ್‍ಕಾರ್ಸ್ ಕಾಲೇಜು ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಕೆ.ಶಾಂತರಾಮ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ವೈದ್ಯರೂ ಆಗಿರುವ ಡಾ. ಸುಧಾಕರ ನಂಬಿಯಾರ್ ಅವರನ್ನು ಪತ್ರಿಕಾ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು. ‘ರೆಡಿಯೋ ಕುಂದಾಪ್ರ’ದಲ್ಲಿ ನಿರ್ವಹಣೆ, ಪ್ರಸಾರ ಹಾಗೂ ತಾಂತ್ರಿಕವಾಗಿ ಸಹಕರಿಸುತ್ತಿರುವ ನಿರಂಜನ್ ಎಚ್.ಬಿ. ಅವರಿಗೆ ಪ್ರಮಾಣಪತ್ರ ನೀಡಲಾಯಿತು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ, ಆಂತರಿಕ ಗುಣಮಟ್ಟ ಭರವಸೆ ಕೋಶ ಇದರ ಸಂಯೋಜಕರಾದ ಪ್ರೊ.ಸತ್ಯನಾರಾಯಣ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಶುಭಾಕರಾಚಾರಿ ಸ್ವಾಗತಿಸಿದರು. ಕರ್ನಾಟಕ ಮಾದ್ಯಮ ಅಕಾಡೆಮಿ ಸದಸ್ಯ ಯು.ಎಸ್. ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ನಾಯ್ಕ್ ಸನ್ಮಾನಿತರನ್ನು ಪರಿಚಯಿಸಿದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣೇಶ ಬೀಜಾಡಿ ವಂದಿಸಿದರು. ರೆಡಿಯೋ ಕುಂದಾಪ್ರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರ್ವಹಿಸಿದರು.











