ಅಗಾಧ ಅನುಭವದ ಪ್ರತಿಫಲ ಸಮಾಜದಲ್ಲಿ ಮೇರುಕಾರ್ಯಸಾಧನೆಗೆ ದಾರಿ-ಶ್ರೀ ವಿದ್ಯಾಪ್ರಸನ್ನ ಶ್ರೀ

0
947

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ವ್ಯಕ್ತಿಯ ವ್ಯಕ್ತಿತ್ವ ದೊಡ್ಡ ಕೆಲಸಗಳಿಗೆ ಸ್ಪೂರ್ತಿದಾಯಕವಾಗುತ್ತದೆ ಎಂದಾದರೆ ಅವರಲ್ಲಿ ವಿಶಿಷ್ಟ ಶಕ್ತಿಯಿದ್ದು ಭಗವಂತನು ಸಕಲ ಅನುಗ್ರಹ ನೀಡಿ ಅವರಲ್ಲಿ ಸನ್ನಿಹಿತನಾಗಿರುತ್ತಾನೆ. ಕೆಲವರ ಅಸ್ತಿತ್ವವು ಇನ್ನೊಬ್ಬರ ದುಃಖ ದೂರ ಮಾಡಿ ಮನಸ್ಸಿಗೆ ಮುದ ನೀಡುತ್ತದೆ. ಅಗಾಧ ಅನುಭವದ ಪ್ರತಿಫಲದ ಪರಿಣಾಮ ವಿವಿಧ ಕ್ಷೇತ್ರದಲ್ಲಿ ಅವರು ಮುಂಚೂಣಿ ಕಾರ್ಯಮಾಡಲು ಸಾಧ್ಯವಾಗಿದೆ. ಯಾವುದೇ ಕಾರ್ಯಕ್ರಮಕ್ಕೆ ಅಪ್ಪಣ್ಣ ಹೆಗ್ಡೆ ಬಂದರೆ ಅಲ್ಲಿ ಧೈರ್ಯವಿರುತ್ತದೆ. ಸಮಾಜಮುಖಿಯಾಗಿ ಕೆಲಸ ಮಾಡಿ ವಿಶಿಷ್ಟವಾಗಿ ಮಿಂಚಿದ ಇವರ ಚಿಂತನೆ ಯುವಪೀಳಿಗೆಗೆ ಮಾದರಿ ಎಂದು ಸುಬ್ರಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

Click Here


ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ (ರಿ.) ಬಸ್ರೂರು ಇವರ ವತಿಯಿಂದ ಬಿ. ಅಪ್ಪಣ್ಣ ಹೆಗ್ಡೆಯವರ ೮೭ನೇ ಹುಟ್ಟುಹಬ್ಬದ ಆಚರಣೆ ಅಂಗವಾಗಿ ಡಿ.೨೪ ಶುಕ್ರವಾರದಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ದತ್ತಿ ನಿಧಿ ವಿತರಣೆ ಹಾಗೂ ಕೃಷಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೃಷಿ ಸಾಧಕ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.

ಶಿಕ್ಷಣ ತಜ್ಞ ಸೀತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಬಾರಿ ಬಸ್ರೂರು ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿಯನ್ನು ಸಾವಯವ ಕೃಷಿ ಸಾಧಕ ಸುಳ್ಯ ತಾಲೂಕು ಬೆಳ್ಳಾರೆಯವರಾದ ಕುರಿಯಾಜೆ ತಿರುಮಲೇಶ್ವರ ಭಟ್ ಅವರಿಗೆ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿ. ಅಪ್ಪಣ್ಣ ಹೆಗ್ಡೆ ಸಮಾಜವನ್ನು ಸಂಘಟಿತವಾಗಿ, ಶಾಂತಿ-ನೆಮ್ಮದಿಯಿಂದ ಬದುಕನ್ನು ಕೊಂಡೊಯ್ಯಲು ಪ್ರಾಧಾನ್ಯತೆ ನೀಡುವ ಸಲುವಾಗಿ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿರುವೆ. ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಬಹಳಷ್ಟು ತೃಪ್ತಿ ಲಭಿಸಿದೆ. ನೆರೆಕೆರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ವೈಯಕ್ತಿಕ ಜೀವನಕ್ಕೆ ಪ್ರಾಧಾನ್ಯತೆ ನೀಡುತ್ತಾ ಸಮಾಜವನ್ನು ಕಡೆಗಣಿಸುವ ಪೃವೃತ್ತಿ ಬಿಡಬೇಕು. ವಿದ್ಯೆಯಿಂದ ಇಂದು ಸಮಾಜ ಜಾಗೃತವಾಗಿದೆ. ಮನುಷ್ಯ ಹುಟ್ಟಿದ ಬಳಿಕ ಮಾಡಬೇಕಾದ ಸಮಾಜಮುಖಿ ಕರ್ತವ್ಯಗಳನ್ನು ಮಾಡಿ ಸಂಘಟಿತ ಸ್ವಸ್ಥ ಸಮಾಜ ನಿರ್ಮಾಣ ಮಾಡೋಣ ಎಂದರು.
ಬಿ. ಅಪ್ಪಣ್ಣ ಹೆಗ್ಡೆಯವರ ಧರ್ಮಪತ್ನಿ ನಾಗರತ್ನ ಅಪ್ಪಣ್ಣ ಹೆಗ್ಡೆ ಈ ಸಂದರ್ಭ ಉಪಸ್ಥಿತರಿದ್ದರು.

ಬಿ.ಅಪ್ಪಣ್ಣ ಹೆಗ್ಡೆಯವರ ೭೫ನೇ ವರ್ಷದ ಹುಟ್ಟುಹಬ್ಬದ ಆಚರಣೆಯಿಂದ ಕಳೆದ ೧೨ ವರ್ಷಗಳಿಂದ ಜನ್ಮದಿನದಂದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಶಕ್ತರಿಗೆ ನೆರವು ಕಾರ್ಯ ನಡೆಸಲಾಗುತ್ತಿದೆ. ಈ ಬಾರಿಯೂ ೨ ಲಕ್ಷದ ೨೫ ಸಾವಿರ ರೂ. ವೈದ್ಯಕೀಯ ವೆಚ್ಚ ಹಾಗೂ ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ೨ ಲಕ್ಷದ ೯೦ ಸಾವಿರವನ್ನು ದತ್ತಿನಿಧಿ ಮೂಲಕ ವಿತರಿಸಲಾಯಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಿ.ಅಪ್ಪಣ್ಣ ಹೆಗ್ಡೆಯವರ ೮೭ನೇ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು. ಅವರ ಮೊಮ್ಮಕ್ಕಳು ಪುಷ್ಪಗುಚ್ವ ನೀಡಿ ತಮ್ಮ ತಾತನಿಗೆ ಶುಭಕೋರಿದರು. ಹಾಗೆಯೇ ಬಸ್ರೂರಿನ ಶ್ರೀ ಶಾರದಾ ಪದವಿ, ಪದವಿಪೂರ್ವ ಕಾಲೇಜು, ಹಿಂದೂ ಹಿರಿಯ ಪ್ರಾಥಮಿಕ ಶಾಲೆ, ನಿವೇದಿತಾ ಪ್ರೌಢಶಾಲೆ ಮತ್ತು ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ ಸಂಸ್ಥೆಯ ಮುಖ್ಯಸ್ಥರು ಅಪ್ಪಣ್ಣ ಹೆಗ್ಡೆಯವರಿಗೆ ಶುಭಕೋರಿದರು. ಇದೇ ವೇಳೆ ವಿದ್ಯಾರ್ಥಿಗಳು ಸಂಸ್ಕೃತ ಗೀತೆ ಮೂಲಕ ಶುಭಾಶಯ ಕೋರಿದ್ದು ಗಮನ ಸೆಳೆಯಿತು.

ಪ್ರಜ್ಞಾ ಪಿ. ಹೆಗ್ಡೆ ಪ್ರಾರ್ಥಿಸಿದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮಕಿಶನ್ ಹೆಗ್ಡೆ ವರದಿ ವಾಚಿಸಿದರು. ಪ್ರತಿಷ್ಠಾನದ ಅನುಪಮಾ ಎಸ್. ಶೆಟ್ಟಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಕೆ.ಸಿ ರಾಜೇಶ್ ಕಾರ್ಯಕ್ರಮ ನಿರೂಪಿಸಿ, ನಿವೃತ್ತ ಮುಖ್ಯ ಶಿಕ್ಷಕ ದಿನಕರ ಆರ್. ಶೆಟ್ಟಿ ದತ್ತಿ ನಿಧಿ ಪಟ್ಟಿ, ಗುರುಕುಲ ಪಬ್ಲಿಕ್ ಶಾಲೆಯ ಶಿಕ್ಷಕಿ ವಿಶಾಲ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಬಸ್ರೂರು ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲೆ ಡಾ. ಚಂದ್ರಾವತಿ ಶೆಟ್ಟಿ ವಂದಿಸಿದರು.

Click Here

LEAVE A REPLY

Please enter your comment!
Please enter your name here