ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಕಾರ್ಮಿಕರ ಮಕ್ಕಳಿಗೆ ರೂ.1125 ಕೋಟಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನಿಧಿ ಬಳಸಿ ವಸತಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿರುವ ಕ್ರಮವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯುಗೆ ಸಂಯೋಜಿತಗೊಂಡಿರುವ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ವಿರೋಧಿಸಿದ್ದು, ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿ ಮತ್ತು ಹೈಕೋರ್ಟ ತೀರ್ಪಿನಂತೆ ಶೈಕ್ಷಣಿಕ ಧನ ಸಹಾಯ ಪಾವತಿಸಬೇಕು ಎಂದು ಒತ್ತಾಯಿಸಿ ಕಟ್ಟಡ ಕಾರ್ಮಿಕರು ಕುಂದಾಪುರ ವಂಡ್ಸೆ ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಕುಂದಾಪುರ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರದ ಅಡಿಯಲ್ಲಿ 47449 ಸರ್ಕಾರಿ ಶಾಲೆಗಳು ನಡೆಯುತ್ತಿವೆ. ಇದರಲ್ಲಿ 2023-24 ನೇ ಸಾಲಿನಲ್ಲಿ 42,66.645 ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಮತ್ತು 1,73,647 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಖಾಸಗಿ ಶಿಕ್ಷಣ ಶಾಲೆಗಳಲ್ಲಿ 46,43,225 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಇಲಾಖೆಗಳು ಸೇರಿ ನಡೆಸುತ್ತಿರುವ 833 ವಸತಿ ಶಾಲೆಗಳಲ್ಲಿ 2.5 ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ಬಹುತೇಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿಭಾಗಗಳಿಗೆ ಸೇರಿರುವವರು ಮತ್ತು ಬಹುತೇಕರ ಮಕ್ಕಳು ಈಗಾಗಲೇ ಇಂತಹ ಸರ್ಕಾರಿ ಹಾಗೂ ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಈಗಾಗಲೇ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು ನಡೆಸುತ್ತಿರುವ ಈ ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿ ಕಟ್ಟಡ ಮತ್ತು ಇತರೆ ಅಸಂಘಟಿತ ವಲಯದ ಮಕ್ಕಳು ಅತ್ಯಂತ ಕಡಿಮೆ ಶುಲ್ಕ ಪಾವತಿಸುತ್ತಿದ್ದಾರೆ. ಅವರುಗಳಿಗೆ ಮಧ್ಯಾಹ್ನ ಬಿಸಿಯೂಟವೂ ದೊರೆಯುತ್ತಿದೆ. ಶೂ ಹಾಗೂ ಸಮವಸ್ತ್ರಗಳು, ಉಚಿತ ಪಠ್ಯಪುಸ್ತಕಗಳು ನೀಡುತ್ತಿರುವಾಗ ಕಾರ್ಮಿಕ ಮಂತ್ರಿಗಳು ಕಟ್ಟಡ ಕಾರ್ಮಿಕರ ಪಿಂಚಣಿ, ಮಕ್ಕಳ ಶೈಕ್ಷಣಿಕ ಧನಸಹಾಯ, ಅಪಘಾತ ಪರಿಹಾರ ಮುಂತಾದ ಸಾಮಾಜಿಕ ಭದ್ರತೆಗಾಗಿ ಇರುವ ಹಣವನ್ನು ವಸತಿ ನಿಲಯದ ಕಟ್ಟಡಗಳಿಗೆ ನೀಡಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.
ಮಂಡಳಿಯಲ್ಲಿ ಹಣ ಇದ್ದರೂ ಕಳೆದ 2-3 ವರ್ಷಗಳಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಧನಸಹಾಯ ಮಂಜೂರು ಮಾಡಲು ಸಿದ್ಧರಿಲ್ಲದ ಇವರಿಗೆ ವಸತಿ ಶಾಲೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಆಸಕ್ತಿ ವಹಿಸುತ್ತಿರುವುದು ಸಂಶಯ ಮೂಡಿಸುತ್ತಿದೆ ಎಂದು ಹೇಳಿದರು.
ಜುಲೈ 09 ರಂದು ಕಟ್ಟಡ ಕಾರ್ಮಿಕರ ಶೈಕ್ಷಣಿಕ ಧನಸಹಾಯ, ಮದುವೆ ಧನಸಹಾಯ ಬಿಡುಗಡೆಗೆ ಹಾಗೂ ಆಧಾರ್ ಕಾರ್ಡ್ ನೆಪವೊಡ್ಡಿ ವಯೋವೃದ್ಧರ ಪಿಂಚಣಿ ನಿರಾಕರಿಸಿದರ ವಿರುದ್ಧ ಕಟ್ಟಡ ಕಾರ್ಮಿಕರು ಜಿಲ್ಲೆಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶಂಕರ ಆಚಾರ್ಯ, ಭಾಸ್ಕರ,ಪ್ರಭಾಕರ ಗಾಣಿಗ, ನೇತ್ರಾವತಿ, ಸುರೇಶ್ ಗಾಣಿಗ ಮೊದಲಾದವರಿದ್ದರು.











