ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಆರ್ಥಿಕ ಸದೃಢತೆಯ ಜೊತೆಗೆ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸಹಕಾರಿ ಸಂಘಗಳು ಪ್ರಾಮಾಣಿಕ ಸೇವೆ ಸಲ್ಲಿಸಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯ. ಅದಕ್ಕೆ ಸಾಹೇಬರಕಟ್ಟೆ – ಶಿರಿಯಾರದ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಒಂದು ಉತ್ತಮ ಊದಾಹರಣೆ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯ ಶ್ರೀ ಮಹಾಗಣಪತಿ ಮಹಾಮ್ಮಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪೀನಾಥ್ ಕಾಮತ್ ಹೇಳಿದರು.
ಅವರು ಭಾನುವಾರ ಸಾಯಬ್ರಕಟ್ಟೆಯಲ್ಲಿ ಒಂದೂವರೆ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ., ಸಾಹೇಬರಕಟ್ಟೆ – ಶಿರಿಯಾರ ಇದರ ನೂತನ ಕಟ್ಟಡ “ಸೌಹಾರ್ದ ಸಿರಿ”ಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ದೀಪ ಪ್ರಜ್ವಲಿಸಿ ಮಾತನಾಡಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು, ಸನಾತನ ತತ್ವದಡಿಯಲ್ಲಿ ಸೌಹಾರದತೆಯೊಂದಿಗೆ ಆರಂಭಗೊಂಡ ಜೈಗಣೇಶ್ ಸಹಕಾರಿ ಸಂಘ ಸದೃಢವಾಗಿ ಬೆಳೆಯುತ್ತಿರುವುದರ ಜೊತೆಗೆ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಸಂಘದ ಭದ್ರತಾ ಕೋಶ ಉದ್ಘಾಟಿಸಿ ಮಾತನಾಡಿದ ಗರಿಕೆಮಠ ಅರ್ಕ ಗಣಪತಿ ದೇವಸ್ಥಾನದ ಅರ್ಚಕ ವೇ.ಮೂ. ರಾಮಪ್ರಸಾದ್ ಅಡಿಗ ಅವರು, ಜಿಎಸ್.ಬಿ ಸಮಾಜದ ಪ್ರತಿಯೊಬ್ಬರು ಕಠಿಣ ಶ್ರಮಿಗಳು, ವ್ಯವಹಾರ ಚತುರರು, ಸೇವಾ ಮನೋಭಾವನೆ ವುಳ್ಳವರು. ಈ ಸಮಾಜ ಎಲ್ಲಾ ಸಮಾಜದೊಂದಿಗೆ ಬೆರೆತ ಸಮಾಜ. ಇನ್ನೊಬ್ಬರಿಗೆ ಹಿತವನ್ನು ಬಯಸಿದ ಸಮಾಜ. ಧಾರ್ಮಿಕ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುತ್ತಾ ಬಂದ ಸಮಾಜ. ಇಂತಹ ಸಮಾಜದ ಮುಖಂಡರ ಸೌಹಾರ್ದ ಸಹಕಾರಿ ಸಂಘ ಹತ್ತಾರು ಶಾಖೆಗಳನ್ನು ಸ್ಥಾಪಿಸುವಂತಾಗಲಿ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪ್ರಭು ಮಾತನಾಡಿ, ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 17 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಜನಸ್ನೇಹಿ ಸೇವೆಯನ್ನು ನೀಡುತ್ತಾ ಅಭಿವೃದಿಯ ಪಥದಲ್ಲಿ ತನ್ನದೇ ರಹದಾರಿ ನಿರ್ಮಿಸಿಕೊಂಡು, ಉತ್ಕೃಷ್ಟತೆಯನ್ನು ಕಾಣುತ್ತಾ ಚಿರಸ್ಥಾಯಿಯಾಗಿ ಉಳಿದಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿರುವ ಈ ಸಂಸ್ಥೆಯು ಉತ್ಕೃಷ್ಟತೆಯ ಹಾದಿಯಲ್ಲಿ ಔನ್ನತ್ಯ ಹೊಂದುವ ಸಲುವಾಗಿ ನೂತನ ಆಧುನೀಕೃತ ಹವಾನಿಯಂತ್ರಿತ ಕಟ್ಟಡವನ್ನು ನಿರ್ಮಿಸಲು ಸಾಧ್ಯವಾಗಿದೆ. ನಿರಂತರ ಸಹಕಾರ ನೀಡುತ್ತಿರುವ ಗ್ರಾಹಕ ಬಂಧುಗಳು, ಆಡಳಿತ ಮತ್ತು ಸಿಬ್ಬಂದಿ ವರ್ಗ, ಕಟ್ಟಡ ನಿರ್ಮಾಣದಲ್ಲಿ ದುಡಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಶ್ಯಾನುಭಾಗ್ ಎತ್ತಿನಟ್ಟಿ ಅವರು, ಸಂಸ್ಥೆ ಬೆಳೆದು ಬಂದ ಹಾದಿಯನ್ನು ವಿವರಿಸುತ್ತಾ, ಸಂಸ್ಥೆಯು ಪ್ರಾರಂಭದ ವರ್ಷದಿಂದಲೂ ಲಾಭದಾಯಕವಾಗಿದ್ದು ನಿರಂತರವಾಗಿ ಆಡಿಟ್ ವರ್ಗೀಕರಣದಲ್ಲಿ “ಎ” ಶ್ರೇಣಿ ಕಾಯ್ದುಕೊಂಡಿದೆ. ಕಳೆದ 10 ವರ್ಷಗಳಿಂದ ಶೇ.13ರಷ್ಟು ಮುನಾಫ್ ನೀಡುತ್ತಿದೆ. ಕಳೆದೆರಡು ವರ್ಷಗಳಿಂದ 95 ಲಕ್ಷಕ್ಕೂ ಅಧಿಕ ಲಾಭಗಳಿಸಿ ಸಂಸ್ಥೆಯ ಆರ್ಥಿಕ ಭದ್ರತೆಗೆ ಸಾಕ್ಷಿಯಾಗಿದೆ. ಸಂಸ್ಥೆಯ ನಿವ್ವಳ ಲಾಭದಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ನಿಧಿ, ವಿದ್ಯಾಪೋಷಕ ನಿಧಿ, ಸದಸ್ಯರ ಕಲ್ಯಾಣ ನಿಧಿ, ಸೈನಿಕ ಕಲ್ಯಾಣ ನಿಧಿ, ಗೋರಕ್ಷಾ ನಿಧಿ, ಚೈತನ್ಯ ನಿಧಿ, ಪಡಿತರ ಕಿಟ್, ವೈದ್ಯಕೀಯ ಪರಿಕರಗಳ ಕಿಟ್, ಮೊಬೈಲ್ ಶವಶೈತ್ಯಾಗಾರ ಪೆಟ್ಟಿಗೆ, ಸ್ಥಳೀಯ ಪಶು ಆಸ್ಪತ್ರೆಗೆ ಜಾನುವಾರುಗಳನ್ನು ಎತ್ತುವ ಸಾಧನ ನೀಡಲಾಗಿದ್ದಲ್ಲದೇ ಸಂಸ್ಥೆಯ ಸಾಮಾಜಿಕ ಮತ್ತು ಆರ್ಥಿಕ ಕಾಳಜಿಗೆ ಸಹಕಾರ ರತ್ನ ಪ್ರಶಸ್ತಿ ಪಡೆದುಕೊಂಡಿದೆ ಎಂದರು.
ಭದ್ರತಾ ಕೊಠಡಿಯನ್ನು ಪಾಂಡುರಂಗ ನಾಯಕ್, ಆಡಳಿತ ಕಚೇರಿ ಸಭಾಂಗಣವನ್ನು ಶಿರಿಯಾರ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಸುಧೀಂದ್ರ ಶೆಟ್ಟಿ, ಶಾಖಾ ಕಚೇರಿಯನ್ನು ರಾಜು ಭಟ್, ಅಧ್ಯಕ್ಷರ ಕೊಠಡಿಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇದರ ನಿರ್ದೇಶಕ ಎಸ್. ಕೆ. ಮಂಜುನಾಥ, ಗಣಕ ಯಂತ್ರವನ್ನು ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಅಧ್ಯಕ್ಷ ಪ್ರದೀಪ್ ಬಲ್ಲಾಳ್ ಉದ್ಘಾಟಿಸಿದರು. ಇದೇ ಸಂದರ್ಭ ಸ್ಥಾಪಕಾಧ್ಯಕ್ಷ ಶಿರಿಯಾರ ಪ್ರಭಾಕರ ನಾಯಕ್ ಹಾಗೂ ಅಧ್ಯಕ್ಷ ಅಶೋಕ್ ಪ್ರಭು ದಂಪತಿಗಳನ್ನು ಸನ್ಮಾನಿಸಲಾಯಿತು.
ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಯಡ್ತಾಡಿ ಗ್ರಾಮ” ಪಂಚಾಯತ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಯು ರಾಜೀವ ಭಟ್ ಉಪ್ಪುಂದ, ಸಂಘದ ಉಪಾಧ್ಯಕ್ಷ ಎಚ್ ನಾರಾಯಣ ಶೆಣೈ, ಗಾವಳಿ, ನಿರ್ದೇಶಕರಾದ ಶಿರಿಯಾರ ಪ್ರಭಾಕರ ನಾಯಕ್, ಮಾಧವ ಹೆಗ್ಡೆ, ಎಸ್. ವೆಂಕಟೇಶ ಪೈ, ಯು. ಪ್ರಸಾದ ಭಟ್, ರಾಘವೇಂದ್ರ ಪ್ರಭು, ಜಗದೀಶ ಹೆಗ್ಡೆ, ರಾಘವೇಂದ್ರ ಹೆಗ್ಡೆ, ರವಿಂದ್ರನಾಥ ಕಿಣಿ, ಪಲ್ಲವಿ ವೈ. ನಾಯಕ್, ಸುನೀತಾ ಹೆಗ್ಡೆ ಉಪಸ್ಥಿತರಿದ್ದರು. ನಿರ್ದೇಶಕರಾದ ಮಾಧವ ಹೆಗ್ಡೆ ಮಧುವನ ಪ್ರಾಸ್ತಾವಿಸಿ, ರವೀಂದ್ರನಾಥ್ ಕಿಣಿ ಸ್ವಾಗತಿಸಿದರು.











