ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಇಂದು (ಜು.24) ವಿಜೃಂಭಣೆಯಿಂದ ನೆರವೇರಿತು.
ಸರದಿ ಸಾಲಿನಲ್ಲಿ ಭಕ್ತಾಧಿಗಳು ದೇವರ ದರ್ಶನ, ಪೂಜೆ ಇತ್ಯಾದಿಗಳನ್ನು ಸಲ್ಲಿಸಿದರು. ಭಕ್ತರಿಗೆ ಸೇವಾರ್ಥಿಗಳ ಮೂಲಕ ಚಿತ್ರಾನ್ನ, ಪಾಯಸ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಜೇಶ ಹೆಬ್ಬಾರ್, ಸದಸ್ಯರಾದ ನರಸಿಂಹ ಅಡಿಗ, ಸುರೇಶ ಬಿ., ನಾಗವೇಣಿ ಪ್ರಭಾಕರ, ಸುಶೀಲಾ ಎಸ್.ಮೆಂಡನ್, ಲಕ್ಷ್ಮಣ ಪೂಜಾರಿ, ಗಣೇಶ ಪೂಜಾರಿ, ಗೋಪಾಲ ದೇವಾಡಿಗ, ಹೆಚ್.ಅನುಕುಮಾರ್ ಶೆಟ್ಟಿ, ದೇವಸ್ಥಾನದ ಅರ್ಚಕರು, ಉಪಾದಿವಂತರು, ನೌಕರರು, ಸ್ವಯಂಸೇವಕರು ಜಾತ್ರೆಯ ಯಶಸ್ಸಿನಲ್ಲಿ ಶ್ರಮಿಸಿದರು.
ಮರವಂತೆ ಜಾತ್ರೆಯ ಸಂದರ್ಭದಲ್ಲಿ ಸಮುದ್ರ ಸ್ನಾನಕ್ಕೆ ವಿಶೇಷ ಮಹತ್ವ ಇತ್ತು. ಸಮುದ್ರದಲ್ಲಿ ಸ್ನಾನ ಮಾಡಿ ಬಳಿಕ ಸೌಪರ್ಣಿಕ ನದಿಯಲ್ಲಿ ಸ್ನಾನ ಮಾಡಬೇಕು ಎನ್ನುವ ನಂಬಿಕೆ ಇದೆ. ಆದರೆ ಈ ಬಾರಿ ಸಮುದ್ರದ ಅಬ್ಬರ ಜಾಸ್ತಿಯಿತ್ತು. ಹಾಗಾಗಿ ಸಮುದ್ರದ ನೀರನ್ನು ಪ್ರೋಕ್ಷಿಸಿಕೊಳ್ಳಲು ಹಾಗೂ ಸಮುದ್ರದ ಅಲೆ ಸ್ಪರ್ಶ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಒಂದೇ ಕಡೆಯಲ್ಲಿ ಮಾತ್ರ ಸಮುದ್ರಕ್ಕಿಳಿಯಲು ಅವಕಾಶ ಕಲ್ಪಿಸಲಾಗಿತ್ತು. ಸಮುದ್ರಕ್ಕಿಳಿಯುವ ಭಕ್ತಾದಿಗಳ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಪೊಲೀಸರು, ಸ್ವಯಂ ಸೇವಕರು ಸಮುದ್ರದ ತೀರದಲ್ಲಿ ಕಟ್ಟೇಚ್ಚರ ವಹಿಸಿದ್ದರು.
ಮಳೆಯ ಅಬ್ಬರಕ್ಕೆ ಸೌಪರ್ಣಿಕೆ ಕೂಡಾ ತುಂಬಿ ಹರಿಯುತ್ತಿದ್ದು ದೇವಸ್ಥಾನ ಮೆಟ್ಟಿಲು ತನಕ ನೀರು ಹರಿಯುತ್ತಿತ್ತು. ಪ್ರವಾಹ ಹೆಚ್ಚಿದ್ದರಿಂದ ನದಿಗಿಳಿಯಲು ಭಕ್ತರಿಗೆ ಅವಕಾಶ ನೀಡಲಿಲ್ಲ.











