ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತ್ರಾಸಿಯ ಮಿಲೇನಿಯಮ್ ಚರ್ಚ್ ಹಾಲ್‍ನಲ್ಲಿ ಆಗಸ್ಟ್ 9 ಮತ್ತು 10ರಂದು ಹಲಸು ಮತ್ತು ಹಣ್ಣು ಮೇಳ ನಡೆಯಲಿದೆ ಎಂದು ಮಹಮ್ಮದ್ ಮತ್ತಾರ್ ಹುಸೇನ್ ತಿಳಿಸಿದರು.
ಅವರು ಕುಂದಾಪುರದ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ತ್ರಾಸಿಯಲ್ಲಿ ಪ್ರಥಮ ಬಾರಿಗೆ ಎರಡು ದಿನಗಳ ಕಾಲ ಹಲಸು ಮೇಳ ನಡೆಯಲಿದೆ. ವಿಶೇಷವಾಗಿ ಆಂಧ್ರ ಪ್ರದೇಶದ ಹಲಸು ಹಾಗೂ ಮಾವು ಮೇಳಕ್ಕೆ ಬರಲಿದೆ. ಹಲಸಿನಲ್ಲಿ ಪ್ರಸಿದ್ಧವಾದ ಕೆಂಪು ಹಲಸು, ಕೇಸರಿ, ಹಾಗೂ ಹಳದಿ ಹಲಸುಗಳು ಇಲ್ಲಿ ಲಭ್ಯವಿರಲಿದೆ. ಜೊತೆಗೆ 100ಕ್ಕೂ ಹೆಚ್ಚು ಮಳಿಗೆಗಳು ಇರಲಿದ್ದು ರಾಜ್ಯದ ವಿವಿಧ ಮೂಲೆಗಳಿಂದ ಸಾವಯವ ಮಾದರಿಯಲ್ಲಿ ಬೆಳೆದ ಮಾವು ಮತ್ತು ಹಲಸಿನ ಉತ್ಪನ್ನಗಳು, ಹಣ್ಣಿನ ಖಾದ್ಯಗಳು ಗ್ರಾಹಕರಿಗೆ ಲಭ್ಯವಿರಲಿದೆ. ವಿಶೇಷವಾಗಿ ಸ್ಪೇಷಲ್ ಹಲಸಿನ ಹೋಳಿಗೆ, ಸ್ಪೇಷಲ್ ಹಲಸಿನ ಜಿಲೇಬಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದರು.
ಹಲಸು ಮೇಳದಲ್ಲಿ ಹಲಸು, ಮಾವು ಹಾಗೂ ವೈವಿಧ್ಯಮಯ ಹೂವಿನ ಗಿಡಗಳು, ಹಣ್ಣಿನ ಗಿಡಗಳ ನರ್ಸರಿಗಳು ಭಾಗವಹಿಸಲಿವೆ. ಬಹು ಆಯ್ಕೆಯ ಗಿಡಗಳು ಲಭ್ಯವಾಗಲಿದೆ. ತರಕಾರಿ, ಹೂವಿನ ಬೀಜಗಳು, ಕೃಷಿ ಉಪಕರಣಗಳ ಮಳಿಗೆಗಳು ಇರಲಿವೆ ಎಂದರು.
ಹಲಸು ಮೇಳವನ್ನು ಸ್ಥಳೀಯ ಚರ್ಚ್ ಧರ್ಮಗುರುಗಳು ಉದ್ಘಾಟಿಸಲಿದ್ದಾರೆ. ನಾವು ಈಗಾಗಲೇ ಉಡುಪಿ, ಮಂಗಳೂರಿನ ವಿವಿಧೆಡೆ ಹಲಸು ಮತ್ತು ಹಣ್ಣು ಮೇಳವನ್ನು ಆಯೋಜಿಸಿದ್ದೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಹಮ್ಮದ್ ಯಾಸಿನ್, ಮಾಸ್ರು, ಅಬ್ದುಲ್ ಗಫೂರ್ ಉಪಸ್ಥಿತರಿದ್ದರು.











