ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ಪುರಸಭೆಯಲ್ಲಿ ಸದಸ್ಯರೋರ್ವರ ಎಲ್ಲ ಸದಸ್ಯರ ಬಗ್ಗೆ ಅಗೌರಯುತ ಪದ ಬಳಕೆ ಮಾಡಿದ್ದಾರೆ ಅಪೇಕ್ಷಿಸಿ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಹಾರ್ಯ ಪದವನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ 10 ನಿಮಿಷಗಳ ಕಾಲ ಸಭೆ ಮುಂದೂಡಿದ ಘಟನೆ ಗುರುವಾರ ನಡೆದ ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.










ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಪ್ರಾರಂಭದಲ್ಲಿ ಯುಜಿಡಿಗೆ ಭೂಮಿ ಖರೀದಿ ವಿಚಾರದಲ್ಲಿ ವಿಚಾರ ಮತ್ತೆ ಮಾರ್ದನಿಸಿತು. ಈ ವಿಚಾರ ಈಗಾಗಲೇ ಲೋಕಾಯುಕ್ತ ತನಿಖೆಯಲ್ಲಿ ಇರುವುದರಿಂದ ಆ ವರದಿ ಬಂದ ಬಳಿಕವೇ ಸಭೆಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ವಿಷಯ ಪ್ರಸ್ತಾಪಿಸಿದ ದೇವಕಿ ಸಣ್ಣಯ್ಯ ಸೂಕ್ತ ಮಾಹಿತಿ ಶೀಘ್ರ ಒದಗಿಸುವಂತೆ ಆಗ್ರಹಿಸಿದರು. ಆಗ ಶ್ರೀಧರ್ ಶೇರುಗಾರ್ ಮಾತನಾಡಿ ಈ ವಿಚಾರದಲ್ಲಿ ವರದಿ ಇನ್ನೂ ಕೈ ಸೇರದಿರುವುದರಿಂದ ಜನಸಾಮಾನ್ಯರು ಅನುಮಾನ ದೃಷ್ಟಿಯಿಂದ ಮಾತನಾಡುತ್ತಿದ್ದಾರೆ. ಇದು ಇಡೀ ಪುರಸಭೆಗೆ ಕಪ್ಪು ಚುಕ್ಕೆಯಾಗಿದೆ ಎಂದರು. ಅದಕ್ಕೆ ಗಿರೀಶ್ ಜಿ.ಕೆ ಮಾತನಾಡಿ ಪುರಸಭೆಗೆ ಕಪ್ಪು ಚುಕ್ಕೆಯಾಗಬಾರದು ಎನ್ನುವ ದೃಷ್ಟಿಯಿಂದಲೇ ಆಡಳಿತ ಪಕ್ಷದ ಸದಸ್ಯನಾಗಿ ಈ ವಿಚಾರ ಪ್ರಾರಂಭದಲ್ಲಿಯೇ ಸಭೆಯ ಮುಂದಿಟ್ಟಿದ್ದೇನೆ. ಈ ದರ ನಿಗದಿ ದೋಷಪೂರಿತವಾಗಿದೆ. ಸರಿ ಪಡಿಸಬೇಕು, ಪುರಸಭೆಯ ಹಣ ಪೋಲಾಗಬಾರದು ಎಂಬ ದೃಷ್ಟಿಯಿಂದ ತನಿಖೆಗೆ ಆಗ್ರಹಿಸಿದ್ದೆ. ತನಿಖೆ ಆಗುತ್ತದೆ ಎಂದರು. ಈ ವಿಚಾರದಲ್ಲಿ ಶ್ರೀದರ್ ಶೇರುಗಾರ್ ಮತ್ತು ಗಿರೀಶ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಶ್ರೀಧರ್ ಶೇರುಗಾರ್ ಹೇಳಿದ ಪದವನ್ನು ಸದಸ್ಯರಿಗೆ ಅಗೌರಯುತವಾಗಿದ್ದು ಹಿಂಪೆಡೆಯಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಆಗ್ರಹಿಸಿದರು. ಮೋಹನದಾಸ ಶೆಣೈ ಮಾತನಾಡಿ ಶ್ರೀಧರ್ ಅಗೌರಯುತ ಪದ ಬಳಕೆ ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದರು. ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ ಸಭೆಯಲ್ಲಿ ಅಗೌರಯುತ ಪದ ಬಳಕೆ ಮಾಡಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಆಗ ಆಡಳಿತ ಪಕ್ಷದ ಎಲ್ಲ ಸದಸ್ಯರು ಕ್ಷಮೆ ಕೇಳದಿದ್ದರೆ ಸಭಾತ್ಯಾಗ ಮಾಡುವುದಾಗಿ ಎಚ್ಚರಿಸಿದರು. ಆಗ ಮಧ್ಯ ಪ್ರವೇಶ ಮಾಡಿದ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ 10 ನಿಮಿಷಗಳ ಕಾಲ ಸಭೆ ಮುಂದೂಡುವುದಾಗಿ ಘೋಷಣೆ ಮಾಡಿದರು.
ಕುಂದಾಪುರ ಪುರಸಭೆಯಲ್ಲಿ ಸರಿಯಾಗಿ ಜನಸಮಾನ್ಯರ ಕೆಲಸಗಳು ಆಗುತ್ತಿಲ್ಲ ಎನ್ನುವ ಬಗ್ಗೆ ದೇವಕಿ ಸಣ್ಣಯ್ಯ ಪತ್ರಿಕಾ ಹೇಳಿಕೆ ನೀಡುವ ಕುರಿತು ಅಧ್ಯಕ್ಷರು ಸಭೆಯ ಗಮನ ಸಳೆದರು. ಹಿರಿಯ ಸದಸ್ಯರ ಈ ದೂರಿನ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಿ ಎಂದು ಶ್ರೀಧರ್ ಪ್ರಶ್ನಿಸಿದರು. ಮಾನ್ಯ ಸದಸ್ಯರು ಪತ್ರಿಕಾ ಹೇಳಿಕೆ ನೀಡಿದ್ದಾರೆಯೇ ಹೊರತು ಪುರಸಭೆಗೆ ಲಿಖಿತ ದೂರು ನೀಡಿಲ್ಲ. ಈಗಲಾದರೂ ಯಾವ ಅಧಿಕಾರಿಯಿಂದ ಸಮಸ್ಯೆಯಾಗುತ್ತದೆ ಎಂದು ಸಭೆಯ ಗಮನಕ್ಕೆ ತರಬೇಕು ಎಂದು ಆಡಳಿತ ಸದಸ್ಯರು ಆಗ್ರಹಿಸಿದರು.
ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ ಇಡೀ ವ್ಯವಸ್ಥೆಯ ಬಗ್ಗೆ ದೂರುವುದು ಸರಿಯಲ್ಲ. ಯಾರಿಂದ ಸಮಸ್ಯೆಯಾಗುತ್ತಿದೆ ಎಂದು ಹೇಳಿದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯ. ಸುಳ್ಳು ಆರೋಪ ಮಾಡಬಾರದು ಎಂದರು. ಈ ಬಗ್ಗೆ ಸಾಕಷ್ಟು ಮಾತಿನ ಚಕಮಕಿ ನಡೆಯಿತು. ಆಗ ದೇವಕಿ ಸಣ್ಣಯ್ಯ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೇ ಲಿಖಿತವಾಗಿ ಮಾಹಿತಿ ನೀಡುತ್ತೇನೆ ಎಂದರು.
ಅಪಾಯಕಾರಿ ಮರದ ಗೆಲ್ಲುಗಳನ್ನು ಕಡಿಯುವ ಬಗ್ಗೆ ಪ್ರಭಾವತಿ ಶೆಟ್ಟಿ, ನಾಮನಿರ್ದೇಶನ ಸದಸ್ಯೆ ಪುಷ್ಪಶೇಟ್ ಸಭೆಯ ಗಮನ ಸಳೆದರು. ಆಗ ಮೋಹನದಾಸ ಶೆಣೈ ಮರ ಕಡಿಯುವ ವಿಚಾರದಲ್ಲಿನ ಆಡಳಿತಾತ್ಮಕ ವಿಚಾರಗಳು, ಅರಣ್ಯ ಇಲಾಖೆಯ ಅನುಮತಿ ಇತ್ಯಾದಿ ವಿಚಾರಗಳ ಬಗ್ಗೆ ತಿಳಿಸಿದರು.
ಕೋಡಿಗೆ ನೀರಿನ ಸಂಪರ್ಕವಾಗಿಲ್ಲ. ಎರಡು ವರ್ಷದಿಂದ ಸಮಸ್ಯೆ ಹಾಗೆಯೇ ಇದೆ ಎಂದು ಅಶ್ಫಕ್ ಆಕ್ರೋಶ ವ್ಯಕ್ತ ಪಡಿಸಿದರು. ನಾಳೆಯೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ತಮ್ಮ ಸಮಕ್ಷಮದಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ 5 ಡಯಾಲಿಸಿಸ್ ಯಂತ್ರ ಇದ್ದು ನಾಲ್ಕು ಹಾಳಾಗಿದೆ. ಪುರಸಭೆ ವತಿಯಿಂದ ಡಯಾಲಿಸಿಸ್ ಯಂತ್ರ ನೀಡುವಂತೆ ಶಾಸಕರು ಸೂಚಿಸಿದ್ದಾರೆ. ಹಾಗಾಗಿ 2 ಡಯಾಲಿಸಿಸ್ ಯಂತ್ರ ನೀಡಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ಈ ಬಗ್ಗೆ ಮೋಹನದಾಸ ಶೆಣೈ, ಶ್ರೀಧರ್, ಗಿರೀಶ್, ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಖಾರ್ವಿ ಧ್ವನಿಗೂಡಿಸಿದರು.
ಅಶ್ವಿನಿ ಪ್ರದೀಪ್ ಮಾತನಾಡಿ ನನ್ನ ವಾರ್ಡ್‍ನಲ್ಲಿ 8 ತಿಂಗಳಿಂದ ದಾರಿ ದೀಪದ ಬೇಡಿಕೆ ಇಟ್ಟಿದ್ದು ಕಂಬ ಹಾಕಿದರೂ ಇನ್ನೂ ದೀಪ ಅಳವಡಿಸಿಲ್ಲ. ಅಲ್ಲಿ ತೋಡು ಇದ್ದು, ಈಗಾಗಲೇ ಮೂರು ಮಕ್ಕಳು ತೋಡಿಗೆ ಬಿದ್ದಿದ್ದಾರೆ ಎಂದು ದೂರಿದರು. ಅದಕ್ಕೆ ಉತ್ತರಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಇಲ್ಲಿ ಎರಡು ಕಡೆಯಿಂದ ತಂತಿ ಇದ್ದು ಈಗಾಗಲೇ ಮೆಸ್ಕಾಂ ಇಂಜಿನಿಯರ್ ಜೊತೆ ಮಾತನಾಡಿದ್ದೇನೆ. ಒಂದು ವಾರದಲ್ಲಿ ಲೈಟ್ ಅಳವಡಿಸುವ ಕೆಲಸ ಆಗುತ್ತದೆ ಎಂದರು. ಶ್ರೀಧರ್ ಶೇರುಗಾರ್ ಸ್ಥಾಯಿ ಸಮಿತಿ ನಿರ್ಣಯ, ಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.
ಪುರಸಭಾ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ ಉಪಸ್ಥಿತರಿದ್ದರು.











