ಕುಂದಾಪುರ ಮಿರರ್ ಸುದ್ದಿ…
ಕೋಟ: ಯುವ ಮನಸ್ಸುಗಳಿಗೆ ಸಂತೋಷ್ ಮೇಷ್ಟ್ರು ವ್ಯಕ್ತಿತ್ವವೇ ಮಾದರಿ ಎಂದು ಕೋಟದ ಜನತಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಸಿ ಕುಂದರ್ ಹೇಳಿದರು.
ಇತ್ತೀಚಿಗೆ ನಿಧನರಾದ ಯುವ ಸಾಹಿತಿ, ಶಿಕ್ಷಕ ಸಂತೋಷ್ ಕುಮಾರ್ ಕೋಟ ಇವರಿಗೆ ಇಂಡಿಕಾ ಕಲಾ ಬಳಗ ಪಡುಕರೆ ಜಟ್ಟಿಗೇಶ್ವರ ದೇಗುಲದಲ್ಲಿ ಹಮ್ಮಿಕೊಂಡ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿ ಜನಸಾಮಾನ್ಯರ ಮನಸ್ಸಿನೊಳಗೆ ಅಚ್ಚಳಿಯದೆ ಉಳಿದ ಸಂತೋಷ್ ಸಮಾಜದ ಬಗ್ಗೆ ಸದಾ ತುಡಿತ ಹೊಂದಿದರು. ಇವರ ಅಗಲುವಿಕೆ ಕರಾವಳಿ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಕಾರ್ಯಚಟುವಟಿಕೆಗಳು ಮುಂದಿನ ದಿನಗಳಲ್ಲಿ ಉಳಿಸಿ ಬೆಳೆಸೋಣ ಎಂದರು.
ಸಂತೋಷ್ ಕುಮಾರ್ ಭಾವಚಿತ್ರಕ್ಕೆ ಗಣ್ಯರಾದ ಕೋಟ ಸಿ. ಎ. ಬ್ಯಾಂಕ್ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ನಿರ್ದೇಶಕ ತಿಮ್ಮ ಪೂಜಾರಿ, ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ, ನ್ಯಾಯವಾದಿ ಟಿ. ಮಂಜುನಾಥ್ ಗಿಳಿಯಾರು, ಊರಿನ ಹಿರಿಯರಾದ ದಾರೋಜ್ಜಿ ಮನೆ ಆನಂದ್ ಮರಕಾಲ, ಇಂಡಿಕಾ ಸಂಸ್ಥೆಯ ಸಂತೋಷ್ ಕಾಂಚನ್, ಮಂಜುನಾಥ್ ಭಂಡಾರಿ, ಕೋಟ ಪಂಚಾಯತ್ ಸದಸ್ಯರಾದ ಭುಜಂಗ ಗುರಿಕಾರ, ಆಟೋಚಾಲಕರಾದ ನಾರಾಯಣ ತಾಂಡೇಲ, ಪಂಚವರ್ಣದ ಅಜಿತ್ ಆಚಾರ್, ಮಹಿಳಾ ಮಂಡಲದ ಲಲಿತಾ ಪೂಜಾರಿ ಮತ್ತಿತರರು ಪುಷ್ಪ ನಮನ ಸಲ್ಲಿಸಿದರು.
ಇಂಡಿಕಾ ಕಲಾ ಬಳಗದ ಅಧ್ಯಕ್ಷ ಜಯರಾಮ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸದಸ್ಯರಾದ ಪ್ರಭಾಕರ್ ಪಡುಕರೆ ಕಾರ್ಯಕ್ರಮ ನಿರ್ವಹಿಸಿದರು.











