ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸ್ವಾಮಿ ವಿವೇಕಾನಂದ ಚಿಂತನಶೀಲ ವಿಚಾರ ವೇದಿಕೆ ಸಾರಥ್ಯದ ವಿವೇಕ ಚೇತನ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ರಾಘವೇಂದ್ರ ಪ್ರಕಾಶನ ಸಹಯೋಗದಲ್ಲಿ ವಿವೇಕ ಚೇತನ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ನೀಡುವ ಗುರುಶ್ರೀ ರಾಜ್ಯ ಪ್ರಶಸ್ತಿಗೆ ಬೈಂದೂರು ಶೈಕ್ಷಣಿಕ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ವೀರೇಂದ್ರ ಜೋಗಿ ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಂಡ್ರೆ ಗ್ರಾಮದ ಹರವರಿಯಲ್ಲಿ ಸರ್ವೋತ್ತಮ ಜೋಗಿ ಹಾಗೂ ಪಾರ್ವತಿ ಜೋಗಿ ಯವರ ಸುಪುತ್ರನಾಗಿ ಜನಿಸಿರುವ ವೀರೇಂದ್ರ ಜೋಗಿ ಅವರು ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು ಬೈಂದೂರು ವಲಯ ಇಲ್ಲಿ ಕಳೆದ 12 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿ.ಎ.ಸಿ.ಪಿ.ಎಡ್ ಪದವೀಧರರಾಗಿರುವ ಇವರು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುತ್ತಾರೆ. ದಿನಾಂಕ 01-09-2007 ರಂದು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಗಂಡಿಬಾಗಿಲು, ಪುತ್ತೂರು ತಾಲೂಕು ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸಕ್ಕೆ ಸೇರ್ಪಡೆಗೊಂಡ ಇವರು ಆ ಶಾಲೆಯಲ್ಲಿ ಕ್ರೀಡಾ ವಿಭಾಗದಲ್ಲಿ ಹಲವಾರು ಮಕ್ಕಳನ್ನು ಸ್ಪರ್ಧಿಸುವಂತೆ ಮಾಡಿ ರಾಜ್ಯಮಟ್ಟದವರೆಗೆ ಅವರ ಪ್ರತಿಭೆಯನ್ನು ಅನಾವರಣಗೊಳಿದರು. ದಿನಾಂಕ 26.08.2013 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲೂರು ಇಲ್ಲಿ ವರ್ಗಾವಣೆಯಾದರು. ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೆ ಕ್ರೀಡಾ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಇಲ್ಲದಿರುವ ಸಂದರ್ಭದಲ್ಲಿ ಇವರು ಈ ಶಾಲೆಗೆ ಬಂದ ನಂತರ ಹೋಬಳಿ ತಾಲೂಕು ಮಟ್ಟದಲ್ಲಿ ಸತತವಾಗಿ 6 ವರ್ಷ ಅಥ್ಲೆಟಿಕ್ಸ್ ನಲ್ಲಿ ಸಮಗ್ರ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವುದಲ್ಲದೆ ತಮ್ಮ ಮಕ್ಕಳಿಗೂ ಕೂಡ ತರಬೇತಿ ನೀಡುವುದರ ಮೂಲಕ ತಮ್ಮ ಇಬ್ಬರು ಪುತ್ರಿಯರಾದ ಬೃಂದಾ ಮತ್ತು ತನ್ವಿ ಅವರು ಮೈಸೂರು ವಿಭಾಗ ಮಟ್ಟದ ಶೆಟ್ಲ್ ಬ್ಯಾಡ್ಮಿಂಟನ್, ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುವುದು ಗಮನಾರ್ಹ. ಇವರ ಸಾಧನೆಗೆ ಮುಖ್ಯ ಗುರುಗಳು ಮತ್ತು ಶಿಕ್ಷಕರ ವೃಂದ ಹಾಗೂ ಪುಷ್ಪಲತಾ ಅವರ ಸಹಕಾರವೂ ಪ್ರಮುಖವಾಗಿದೆ.











