ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ರಸ್ತೆ ಗುಂಡಿಗಳ ಮುಂದೆ ನಿಂತು ಪೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಬಗ್ಗೆ ಲೇವಡಿ ಮಾಡುತ್ತಿರುವ ಬಿಜೆಪಿ ಮುಖಂಡರು ರಸ್ತೆ ಹೇಗೆ ಗುಂಡಿ ಬಿದ್ದಿದೆ ಎನ್ನುವ ಕುರಿತು ಆತ್ಮಾವಲೋಕಮಾಡಿಕೊಳ್ಳಬೇಕು ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ .
ಬಿಜೆಪಿ ಸರಕಾರವಿರುವಾಗ 40 ಶೇಕಡಾ ಕಮೀಷನ್ ಪಡೆದು ಕಾಮಗಾರಿ ಮಂಜೂರು ಮಾಡಿರುವುದರಿಂದ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿರುತ್ತಾರೆ . ಈ ಕಾರಣದಿಂದ ರಸ್ತೆಯಲ್ಲಿ ಹೊಂಡ ಬಿದ್ದಿದೆ . ಬಿಜೆಪಿ ಸರಕಾರವಿರುವಾಗ ಮಾಡಿದ ರಸ್ತೆಗಳಿಗೆ ಟೆಂಡರ ನಿಯಮದಂತೆ 3 ವರ್ಷ ನಿರ್ವಹಣೆ ಇದೆ . ಇದೆ ಗುಂಡಿಗಳ ಮುಂದೆ ನಿಂತು ಪೋಟೋ ತೆಗೆಸಿಕೊಂಡು ಕಾಂಗ್ರೆಸ್ ಸರಕಾರವನ್ನು ಲೇವಡಿ ಮಾಡುತ್ತಿರುವುದು ಹಾಸ್ಯಾಸ್ಪದ . ರಸ್ತೆ ಗುಂಡಿ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರು ಬೈಂದೂರು – ಕೊಲ್ಲೂರು ಮತ್ತು ಮಲ್ಪೆ – ಆಗುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿ ಫೋಟೋ ತೆಗೆಸಿಕೊಳ್ಳಲಿ .
2021 ರಿಂದ 2023 ರ ತನಕ ಬಿಜೆಪಿ ಸರಕಾರದ ಅವಧಿಯಲ್ಲಿ ಆರ್ಥಿಕ ಇಲಾಖೆಯ ಅನುಮೋದನೆ ಇಲ್ಲದೆ 40 ಶೇಕಡಾ ಕಮೀಷನ್ ಪಡೆದು ಸಾವಿರಾರು ಕೋಟ ರೂಪಾಯಿ ಕಾಮಗಾರಿಗಳನ್ನು ಇಲಾಖಾ ಮಟ್ಟದಲ್ಲಿ ಮಂಜೂರು ಮಾಡಿಸಿ ಕಾಮಗಾರಿ ನಡೆಸಿದ್ದು , ಆ ಕಾಮಗಾರಿಗಳಿಗೆ ಸಾವಿರಾರೂ ಕೋಟಿಗೂ ಹೆಚ್ಚು ಬಿಲ್ಲು ಪಾವತಿ ಮಾಡಿಸುವ ಹೊಣೆ ಈಗ ಕಾಂಗ್ರೆಸ್ ಸರಕಾರದ ಮೇಲೆ ಇದೆ . ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾದ ನಂತರ ಆರ್ಥಿಕ ಶಿಸ್ತಿನಂತೆ ಹಳೆ ಬಿಲ್ಲುಗಳ ಪಾವತಿಗೆ ಆಧ್ಯತೆ ನೀಡಿ ಹೊಸ ಕಾಮಮಗಾರಿಗಳಿಗೆ ಮಂಜೂರಾತಿ ನೀಡಿ ನಿರಂತರ ಅಭಿವೃದ್ದಿ ಕಾರ್ಯಕ್ರಮ ಮುಂದುವರಿಸಿಕೊಂಡು ಬಂದಿರುತ್ತಾರೆ.
ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಕಾಂಗ್ರೆಸ್ ಪಕ್ಷದ ಸರಕಾರ ನೀಡುತ್ತಿರುವ ಪಂಚ ಗ್ಯಾರಂಟಿ ಯೋಜನೆ ಬಿಜೆಪಿಯವರಿಗೆ ಬಿಸಿ ತುಪ್ಪವಾಗಿದೆ. ಸರಕಾರದ ಹಣ ಬಡವರ ಮತ್ತು ಮಧ್ಯಮ ವರ್ಗದವರ ಖಾತೆಗೆ ಮಧ್ಯವರ್ತಿಗಳಿಲ್ಲದೆ ನೇರ ಹೋದರೆ ಬಿಜೆಪಿಯವರು ತಲೆಕೆಡಿಸಿ ಕೊಳ್ಳುವುದೇಕೆ ? . ಬಡವರು ಬಡವರಾಗಿಯೆ ಉಳಿಯಬೇಕೆ ? . ಮಹಿಳೆಯರು ಸ್ವಾವಲಂಬಿಗಳಾಗಬಾರದೆ ? . ಐಷಾರಾಮಿ ಜೀವನದ ವ್ಯವಸ್ಥೆಯಲ್ಲಿರುವವರಿಗೆ ಬಡತನದ ಅರಿವು ಇರುವುದಿಲ್ಲ . ಆದ್ದರಿಂದ ಇಂತಹ ಅಪಪ್ರಚಾರ ಮಾಡುತ್ತಾರೆ .
ರಾಜ್ಯದ ಬಡವರು ಪಂಚಗ್ಯಾರಂಟಿ ಸೌಲಭ್ಯ ಪಡೆಯಲಿ , ವಿನಾಃ ಕಾರಣ ಬಡವರ ಯೋಜನೆ ವಿಚಾರದಲ್ಲಿ ಬಿಜೆಪಿ ಜನರ ದಿಕ್ಕು ತಪ್ಪಿಸುವುದು ಬೇಡ .











