ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಬಸ್ರೂರಿನಲ್ಲಿರುವ ತುಳುವೇಶ್ವರ ದೇವಸ್ಥಾನವು 500 ವರ್ಷಗಳ ಹಿಂದೆ ಈ ದೇವಾಲಯ ಶಿಥಿಲಗೊಂಡಿದ್ದರೂ ಕೂಡಾ, ಪ್ರಕೃತಿಯೇ ಆವರಣವಾಗಿ ಗರ್ಭಗುಡಿಯಾಗಿ ಉಳಿಸಿಕೊಂಡು ಭಕ್ತರನ್ನು ತನ್ನತ್ತ ಸಳೆಯುತ್ತಿದೆ. ತುಳುವೇಶ್ವರ ಕೇವಲ ಒಂದು ದೇವರಲ್ಲ, ತುಳುನಾಡಿನ ಜನಪದ, ಸಂಸ್ಕೃತಿ, ಆಚಾರ-ವಿಚಾರ, ಪರಂಪರೆಯ ಜೀವಂತ ಸಂಕೇತ. ಬಸ್ರೂರಿನಂತಹ ಶ್ರೇಷ್ಠ ಚಾರಿತ್ರಿಕ ನಾಡಿನಲ್ಲಿ ತುಳುವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಾಡುವ ಸಂಕಲ್ಪ ಮಾಡಿದ್ದು, ಆ ನಿಟ್ಟಿನಲ್ಲಿ ಅಕ್ಟೋಬರ್ 6ರಿಂದ 11ರ ತನಕ ತುಳುವೇಶ್ವರ ದೇವಸ್ಥಾನದ ವಠಾರದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನೆಡೆಸಲು ತೀರ್ಮಾನಿಸಲಾಗಿದೆ ಎಂದು ತುಳು ವಲ್ರ್ಡ್ ಫೌಂಡೇಶನ್ ಕಟೀಲು ನಿರ್ದೇಶಕ ಡಾ. ರಾಜೇಶ ಆಳ್ವ ತಿಳಿಸಿದರು.
ಅವರು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಬಸ್ರೂರಿನಲ್ಲಿ ತುಳುವೇಶ್ವರ ದೇವಸ್ಥಾನದ ಜೀರ್ಣೋದ್ದಾರವೂ ಒಂದಾಗಿದ್ದು, ಈಗಾಗಲೇ ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಕೂಡಾ ಪೂರಕ ಅಂಶಗಳು ತಿಳಿದು ಬಂದಿದ್ದು, ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುವ ನಿಟ್ಟಿನಲ್ಲಿ ಕಾಸರಗೋಡುವಿನ ಶಶಿಧರ ಮಾಂಞಡ್ ಮತ್ತು ಬಳಗದವರಿಂದ ಅಷ್ಟಮಂಗಲ ಪ್ರಶ್ನೆಯನ್ನು ಆಯೋಜಿಸಲಾಗಿದೆ ಎಂದರು.
2015ರಲ್ಲಿ ತುಳುನಾಡ ತಿರ್ಗಾಟ ಕಾರ್ಯಕ್ರಮಕ್ಕೆ ಇಲ್ಲಿಂದಲೇ ಚಾಲನೆ ನೀಡಲಾಗಿತ್ತು. 2016ರಲ್ಲಿ ಬದಿಯಡ್ಕದಲ್ಲಿ ನಡೆದ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮದ ಪ್ರಯುಕ್ತ 108 ದಿನಗಳ ರಥಯಾತ್ರೆಗೆ ಇಲ್ಲಿಂದಲೇ ಚಾಲನೆ ನೀಡಲಾಗಿತ್ತು. 2017ರಲ್ಲಿ 1ಲಕ್ಷ ಸಹಿ ಸಂಗ್ರಹ ಅಭಿಯಾನ, 2018ರಲ್ಲಿ ಅಪ್ಪಣ್ಣ ಹೆಗ್ಡೆಯವರ ನೇತೃತ್ವದಲ್ಲಿ ತುಳುನಾಡೋಚ್ಚಯ ಕಾರ್ಯಕ್ರಮದ ರೂಪುರೇಷೆ ಬಸ್ರೂರಿನಲ್ಲಿಯೇ ಆಗಿತ್ತು. ತುಳುವೇಶ್ವರ ದೇವಸ್ಥಾನ ರಾಜ್ಯದ ಎರಡೇ ಭಾಗದಲ್ಲಿ ಕಂಡು ಬರುತ್ತಿದ್ದು ಬಸ್ರೂರು ಒಂದಾದರೆ, ಇನ್ನೊಂದು ಹಾವೇರಿ ಜಿಲ್ಲೆಯ ಅರಕಲಗೋಡು ಎಂಬಲ್ಲಿ ಕಾಣಬಹುದಾಗಿದೆ ಎಂದರು.
ಬಸ್ರೂರು ತುಳುವೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಈಗಾಗಲೇ ತುಳುವ ಮಹಾಸಭೆ, ಸಮಿತಿ ರಚನೆ ಮಾಡಲಾಗಿದೆ. ಕೇವಲ ತುಳುನಾಡಿನವರು ಮಾತ್ರವಲ್ಲದೆ ಜನತೆ ಸಮಷ್ಠಿಯಾಗಿ ಭಾಗವಹಿಸಿ ದೇವಸ್ಥಾನ ಜೀರ್ಣೋದ್ದಾರ ಮಾಡಬೇಕು, ಬಸ್ರೂರು ಜಗತ್ತು ಗುರುತಿಸುವ ಅಧ್ಯಯನ ಕೇಂದ್ರವಾಗಬೇಕು ಎನ್ನುವುದು ನಮ್ಮ ಅಪೇಕ್ಷೆಯಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ರಾಮ್ ಕಿಶನ್ ಹೆಗ್ಡೆ ಬಸ್ರೂರು, ತುಳು ವಲ್ರ್ಡ್ ಫೌಂಡಶನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬಲ್ಯಾಯ, ಕಾರ್ಯನಿರ್ವಹಕ ಡಿ.ಕೆ ಹರಿಪ್ರಸಾದ್, ತುಳುವ ಮಹಾಸಭಾ ತಾಲೂಕು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ದಿನಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು..











