ಕುಂದಾಪುರ :ಹಣತೆಗಳು, ಗೂಡುದೀಪಗಳ ಬೆಳಕಿನಲ್ಲಿ ಬೆಳಗಿದ ಸುಜ್ಞಾನ ಶಿಕ್ಷಣ ಸಂಸ್ಥೆ – ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ದೀಪಾವಳಿ ಸಂಭ್ರಮ, ಸಡಗರ

0
420

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಆಕಾಶದಲ್ಲಿ ಕಾರ್ಮೋಡದ ವಾತಾವರಣ, ಹಿತವಾದ ತಂಗಾಳಿ ಮೈ ಮನಕೆ ತಂಪನಿಯುತ್ತಿತ್ತು.ಆಗಷ್ಟೇ ಜಡಿಮಳೆಯೊಂದು ಧೋ ಎಂದು ಸುರಿದ ಹೋದ ಕುರುಹು ಕೂಡ ಅಲ್ಲಿತ್ತು. ಮಳೆಯಲಿ ಮಿಂದೆದ್ದ ಮರಗಿಡಗಳು ನವವಧುವಿನಂತೆ ಕಂಗೊಳಿಸುತ್ತಿದ್ದರೆ ದೂರದಲ್ಲಿ ನಿಧಾನಕ್ಕೆ ಕೇಳಿಬರುತ್ತಿರುವ ಗೋಮಾತೆಯ ಕೊರಳಿನ ಘಂಟೆಯ ನಿನಾದ, ತುಳಸಿಯ ಕಂಪು, ಹಬ್ಬದೂಟದ ಘಮಲು, ಜೊತೆಗೆ ಸಾಲು ಸಾಲು ಬೆಳಕಿನ ಹಣತೆ, ಹೊಸ ಬಟ್ಟೆ ತೊಟ್ಟ ಕನಸು ಕಂಗಳಿನ ಮಕ್ಕಳ ಕಲರವ ಒಂದು ಕಡೆಯಾದರೆ, ನೇಗಿಲು, ನೊಗ, ಕಳಸಿಗೆ, ತೊಟ್ಟಿಲು ಹೀಗೆ ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳು, ಕೃಷಿ ಚಟುವಟಿಕೆಯಲ್ಲಿ ಬಳಸಲಾಗುತ್ತಿದ್ದ ಪರಿಕರಗಳು ಇನ್ನೊಂದಡೆ. ಈ ಸುಂದರ ದೃಶ್ಯ ಕಾವ್ಯ ಕಂಡು ಬಂದಿದ್ದು ಯಡಾಡಿ-ಮತ್ಯಾಡಿಯಲ್ಲಿರುವ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಕ್ಟೋಬರ್ 22 ಬುಧವಾರದಂದು ಹಾಸ್ಟೆಲ್ ನಲ್ಲಿರುವ ಮಕ್ಕಳಿಗಾಗಿ ದೀಪಾವಳಿಯನ್ನು ಬಹಳ ಅದ್ಧೂರಿಯಾಗಿ ಹಾಗೂ ಶಾಸ್ತ್ರೋಕ್ತಬದ್ಧವಾಗಿ ಆಚರಿಸಿದರು.ಈ ಕಾರ್ಯಕ್ರಮದಲ್ಲಿ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ನ ಪರಮೇಶ್ವರ್, ಕಿಶನ್ ಹೆಗ್ಡೆ ಕೊಳ್ಕೆಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

“ಅಕ್ಷರವೆನ್ನುವುದು ದೀಪವಿದ್ದಂತೆ. ಈ ಅಕ್ಷರವೆನ್ನುವ ಜ್ಞಾನದ ಬೆಳಕನ್ನು ಸುಜ್ಞಾನ ಕಾಲೇಜು ಮಕ್ಕಳ ಮನಸ್ಸಿನಲ್ಲಿ ಪಸರಿಸುತ್ತಿದೆ. ಸುಜ್ಞಾನ ಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುತ್ತಾ ಮಕ್ಕಳ ಮನಸ್ಸಿನಲ್ಲಿ ಸದ್ವಿಚಾರಗಳನ್ನು ಬಿತ್ತುತ್ತಿದೆ ಎಂದು ಪರಮೇಶ್ವರ್ ಮೆಚ್ಚುಗೆಯ ಮಾತುಗಳನ್ನಾಡಿದರು.

Click Here

ಕಿಶನ್ ಹೆಗ್ಡೆ ಕೊಳ್ಕೆಬೈಲು ಮಾತನಾಡಿ, “ವಿದ್ಯೆ ಕಲಿಸಿದ ಗುರು ಹಾಗೂ ಜನ್ಮ ನೀಡಿದವರನ್ನು ಎಂದಿಗೂ ಮರೆಯಬಾರದು. ಹಾಗೆಯೇ, ಕೀಳರಿಮೆಯನ್ನಾಗಲಿ ಇಲ್ಲವೆ ಅತಿಯಾದ ಆತ್ಮವಿಶ್ವಾಸವನ್ನಾಗಲಿ ಬೆಳೆಸಿಕೊಳ್ಳಬಾರದು. ಮಾನವೀಯ ಮೌಲ್ಯಗಳ ಪಾಲನೆಗೆ ಬದ್ಧವಾಗಿರುವುದು ಮುಖ್ಯ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, “ಮಕ್ಕಳಿಗೆ ಸಹಾಯವಾಗಲೆಂದು ಇಂತಹ ಕಾರ್ಯಕ್ರಮಗಳನ್ನುಸಂಸ್ಥೆಯು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಈ ಕಾರ್ಯಕ್ರಮಗಳು ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಹಬ್ಬದ ಆಚರಣೆಗಳ ಬಗ್ಗೆ ಅರಿವು ಮೂಡಿಸುವುದರಿಂದ ಮಕ್ಕಳಿಗೆ ನಮ್ಮ ಪರಂಪರೆಯ ಬಗ್ಗೆ ಗೌರವ ಹೆಚ್ಚುತ್ತದೆ. ಜೊತೆಗೆ, ಅವರ ಸರ್ವತೋಮುಖ ಬೆಳವಣಿಗೆಗೆ ಇಂಬು ನೀಡುತ್ತದೆ” ಎಂದರು.

ಖಜಾಂಚಿ ಭರತ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. “ದೀಪಾವಳಿ ಎಂದರೆ ನಮ್ಮ ಸಂಸ್ಕೃತಿ, ಇತಿಹಾಸವನ್ನು ಸಾರುವ ಹಬ್ಬವಾಗಿದೆ. ಹಾಸ್ಟೆಲ್ ನಲ್ಲಿರುವ ಮಕ್ಕಳಿಗೆ ಹಬ್ಬಗಳು ಹಾಗೂ ಅವುಗಳ ಆಚರಣೆಗಳ ಬಗ್ಗೆ ಅರಿವು ಮೂಡಿಸಲು ಸಂಸ್ಥೆಯು ಪ್ರತಿಯೊಂದು ಹಬ್ಬ ಆಚರಣೆಗೂ ಒತ್ತು ನೀಡುತ್ತಿದೆ. ಇದರಿಂದ ಮಕ್ಕಳಿಗೆ ನಮ್ಮ ಸಂಪ್ರದಾಯದ ತಿಳಿಯಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

“ಸನಾತನ ಧರ್ಮದ ಪ್ರತಿಯೊಂದು ಹಬ್ಬವೂ ಒಂದೊಂದು ಸಂದೇಶ ನೀಡುತ್ತದೆ. ವಿದ್ಯಾರ್ಥಿಗಳು ಕೆಟ್ಟದ್ದನ್ನು ಬಿಟ್ಟು ಒಳ್ಳೆಯ ವಿಷಯಗಳನ್ನು ಮೈಗೂಡಿಸಿಕೊಳ್ಳಬೇಕು. ಓದುವುದರ ಕಡೆ ಹೆಚ್ಚು ಗಮನ ಹರಿಸಬೇಕು” ಎಂದು ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ನುಡಿದರು.

ಕಾರ್ಯಕ್ರಮದಲ್ಲಿ ದೀಪಾವಳಿ ಹಬ್ಬದ ಪ್ರತಿಯೊಂದು ಪದ್ಧತಿ, ರೀತಿ ರಿವಾಜುಗಳನ್ನು ಚಾಚೂ ತಪ್ಪದೇ ಆಚರಿಸಲಾಯಿತು. ಗದ್ದೆಗೆ ಹಿಟ್ಟು ಬಡಿಸುವುದರಿಂದ ಹಿಡಿದು, ಬಲೀಂದ್ರ ಕರೆಯುವುದು, ತುಳಸಿಕಟ್ಟೆ ಪೂಜೆ, ಗೋಪೂಜೆಗಳನ್ನು ಬಹಳ ಅದ್ಭುತವಾಗಿ ಮಾಡಲಾಯಿತು.ಇದರ ಜೊತೆಗೆ ಪ್ರಾಚೀನ ವಸ್ತುಗಳ ಪ್ರದರ್ಶನ ಕೂಡ ಗಮನ ಸೆಳೆದಿತ್ತು. ಇದರಲ್ಲಿ ಕೃಷಿ ಚಟುವಟಿಕೆಯಲ್ಲಿ ಬಳಸಲಾಗುವ ಪರಿಕರಗಳಿಗೆ ಪೂಜೆ ಸಲ್ಲಿಸಲಾಯಿತು.ಇನ್ನು ಅರೆಹೊಳೆ ನಂದಗೋಕುಲ ಕಲಾವಿದರು ಪ್ರಸ್ತುತಪಡಿಸಿದ ʼಬಿಡುವನೆ ಬ್ರಹ್ಮಲಿಂಗʼ ನೃತ್ಯ ಪ್ರದರ್ಶನ ಎಲ್ಲರ ಕಣ್ಮನ ಸೆಳೆಯಿತು.ಮಕ್ಕಳಿಗೆ ಹಬ್ಬದ ಆಚರಣೆಯನ್ನು ತಿಳಿಸಿಕೊಡುವುದರ ಜೊತೆಗೆ ಹಬ್ಬದೂಟವನ್ನೂ ಕೂಡ ಅಷ್ಟೇ ಅದ್ಧೂರಿಯಾಗಿ ಮಾಡಿ ಮಕ್ಕಳು ಹಾಗೂ ಪೋಷಕರ ಬಾಯಿಗೆ ಸಿಹಿ ಉಣಬಡಿಸಲಾಯಿತು.

ಚಿಂತಕರಾದ ಪಡುಕರೆ ಉದಯಶೆಟ್ಟಿ, ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಿ.ಅರುಣ್ ಕುಮಾರ್ ಹೆಗ್ಡೆ ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ, ಮುಖ್ಯೋಪಾಧ್ಯಾಯ ಪ್ರದೀಪ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಕೃತಿ ಶಿಕ್ಷಕಿ ಶ್ರೀಮತಿ ಸುದಕ್ಷಿಣ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here