ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸಹಕಾರ ಕ್ಷೇತ್ರದಲ್ಲಿ ಶ್ರೇಷ್ಠ ಸೇವೆ ಮತ್ತು ಆರ್ಥಿಕ ಸ್ಥಿರತೆ ಸಾಧಿಸಿರುವ ಹಿನ್ನೆಲೆಯಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಪ್ರದಾನ ಮಾಡಲಾದ `ಸಹಕಾರ ಮಾಣಿಕ್ಯ’ ಪ್ರಶಸ್ತಿ ಲಭಿಸಿದೆ. 67 ವರ್ಷಗಳ ಸೇವೆಯ ಇತಿಹಾಸ ಹೊಂದಿರುವ ಸಂಘವು 68ನೇ ವರ್ಷಕ್ಕೆ ಪ್ರವೇಶಿಸುತ್ತಿದ್ದು, 302 ಕೋಟಿ ರೂ. ಠೇವಣಿ, 251 ಕೋಟಿ ರೂ. ಸಾಲ ವಿತರಣೆ ಹಾಗೂ 1386 ಕೋಟಿ ರೂ. ವಾರ್ಷಿಕ ವಹಿವಾಟು ದಾಖಲಿಸಿದೆ. ಸಂಸ್ಥೆ ಸತತ 16 ವರ್ಷಗಳ ಕಾಲ `ಅ’ ತರಗತಿ ಆಡಿಟ್ ವರ್ಗೀಕರಣ ಪಡೆಯುತ್ತಿರುವುದು ಅದರ ಪರಿಣಾಮಕಾರಿ ಆಡಳಿತ ಮತ್ತು ಜನನಂಬಿಕೆಯ ಸಂಕೇತವಾಗಿದೆ. 2024?25ನೇ ಸಾಲಿನಲ್ಲಿ ಸಂಸ್ಥೆ ಶೇ. 98.53ರಷ್ಟು ಸಾಲ ವಸೂಲಾತಿ ಮತ್ತು 5.83 ಕೋಟಿ ರೂಪಾಯಿ ಲಾಭ ಸಾಧಿಸಿದೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆಯನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಸಹಕಾರಿ ಸಂಸ್ಥೆಯಾಗಿ ಅನುಷ್ಠಾನಗೊಳಿಸಿರುವ ವಿಶೇಷತೆ ಸಂಸ್ಥೆಗೆ ಸೇರಿದೆ. ರೈತರಿಗಾಗಿ ರೈತ ಸಂಜೀವಿನಿ ಕ್ರೆಡಿಟ್ ಕಾರ್ಡ್ ಯೋಜನೆ ಜಾರಿಗೆ ತಂದಿದ್ದು, ಕೃಷಿ ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ಸಕಲ ಮಾರಾಟ ಮಳಿಗೆಗಳ ಮೂಲಕ ಕೈಗೆಟುಕುವ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ.
ಮಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಹಕಾರಿ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಪರವಾಗಿ ಅಧ್ಯಕ್ಷ ಡಾ. ಕೃಷ್ಣ ಕಾಂಚನ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗವೂ ಈ ಸಂದರ್ಭದಲ್ಲಿ ಜೊತೆಗಿದ್ದರು.











