ಕುಂದಾಪುರ ಮಿರರ್ ಸುದ್ದಿ…
ಬ್ರಹ್ಮಾವರ :ಬ್ರಹ್ಮಾವರ, ಕೋಟ, ಪಡುಬಿದ್ರಿ ಹಾಗೂ ಮುಲ್ಕಿಯಲ್ಲಿ ಸರ್ವಿಸ್ ರಸ್ತೆ ಮತ್ತು ಪ್ಲೈ ಓವರ್ ರಚಿಸಲು ವಿಸ್ತ್ರತ ಯೋಜನಾ ವರದಿ ಸಿದ್ದಪಡಿಸಲು ಏಜೆನ್ಸಿ ನೇಮಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ -66 ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ತಿಳಿಸಿದರು.
ಅವರು ಬ್ರಹ್ಮಾವರದ ಹೋಟೆಲ್ ಆಶ್ರಯ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಸೆ.೨ರಂದು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ-೬೬ ಉಳಿಸಿ ಹೋರಾಟ ಸಮಿತಿ ವತಿಯಿಂದ ಬೇಡಿಕೆಗಳ ಕುರಿತು ವಿಸ್ತ್ರತವಾಗಿ ತಿಳಿಸಿದ್ದು ಸಂಸದರು ಹಾಗೂ ಅಧಿಕಾರಿಗಳು ನಮ್ಮ ಬೇಡಿಕೆಗೆ ಸ್ಪಂಧಿಸಿದ್ದಾರೆ. ಬ್ರಹ್ಮಾವರದಲ್ಲಿ ೭ ಪಿಲ್ಲರ್‌ಗಳ ಪ್ಲೈ ಓವರ್ ರಚನೆ, ಭದ್ರಗಿರಿಯಿಂದ ಮಾಬುಕಳ ಸೇತುವೆ ತನಕ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆ ರಚನೆ, ದೂಪದಕಟ್ಟೆ, ಆಕಾಶವಾಣಿ ಬೈಪಾಸ್, ಉಪ್ಪಿನಕೋಟೆಯಲ್ಲಿ ಮೀಡಿಯನ್ ಓಪನಿಂಗ್ ಬಗ್ಗೆ ಆಗ್ರಹಿಸಿ ಸೆ.೪ರಂದು ಬ್ರಹ್ಮಾವರ ಬಂದ್ ಮಾಡಿ ಉಪ್ಪಿನಕೋಟೆ ಫಾರ್ಚೂನ್ ಹೋಟೆಲ್‌ನಿಂದ ಧರ್ಮಾವರ ಅಡಿಟೋರಿಯಂವರೆಗೆ ಸಾರ್ವಜನಿಕರ ಸಹಕಾರದಿಂದ ಶ್ರಮದಾನದ ಮೂಲಕ ಸರ್ವಿಸ್ ರಸ್ತೆ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಆದರೆ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಆಶ್ವಾಸನೆಯಿಂದ ಆಯೋಜಿಸಿದ್ದ ಹೋರಾಟವನ್ನು ಮುಂದೂಡಲಾಗಿತ್ತು. ಜಿಲ್ಲಾಧಿಕಾರಿಯವರ ಸಮಕ್ಷಮ ನಡೆದ ಸಭೆಯಲ್ಲಿ ಸಂಸದರು ಭರವಸೆ ನೀಡಿದಂತೆ ಕೇಂದ್ರ ಸಾರಿಗೆ ಸಚಿವರಿಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ, ಯೋಜನಾ ನಿರ್ದೇಶಕರು ಹಾಗೂ ಪ್ರಾದೇಶಿಕ ಕಚೇರಿಯ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿದ್ದು ಕೇಂದ್ರ ಸಾರಿಗೆ ಸಚಿವರ ನಿರ್ದೇಶನದೊಂದಿಗೆ ಸರ್ವಿಸ್ ರಸ್ತೆ ಹಾಗೂ ದೀರ್ಘಕಾಲಿನ ಕ್ರಮಕ್ಕೆ ವಿಸ್ತ್ರತ ಯೋಜನ ವರದಿ (ಡಿಪಿಆರ್) ತಯಾರಿಸಲು ಮೆ| ದ್ರುವ ಕನ್ಸಲ್ಟೆನ್ಸಿ ಸರ್ವಿಸಸ್ ಲಿ. ಸಂಸ್ಥೆಯ ಇಂಜಿನಿಯರ್‌ಗಳನ್ನು ನೇಮಿಸಲಾಗಿದೆ. ಇವರು 15 ದಿನದೊಳಗೆ ಆಗಮಿಸಿ ಕೋಟ, ಬ್ರಹ್ಮಾವರ, ಮುಲ್ಕಿ ಹಾಗೂ ಪಡುಬಿದ್ರಿಯಲ್ಲಿ ವಿಸ್ತ್ರತ ಯೋಜನಾ ವರದಿ ಸಿದ್ದಪಡಿಲಿದ್ದಾರೆ ಎಂದು ಮಾನ್ಯ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಈ ಸಂದರ್ಭ ಹೋರಾಟ ಸಮಿತಿ ವತಿಯಿಂದ ಮಾಹಿತಿ ನೀಡಲಾಗುವುದು. ಬ್ರಹ್ಮಾವರ, ಕೋಟ, ಪಡುಬಿದ್ರಿ, ಮುಲ್ಕಿಯಲ್ಲಿ ಸರ್ವಿಸ್ ರಸ್ತೆ ಹಾಗೂ ಪ್ಲೈ ಓವರ್ ರಚಿಸಲು ವಿಸ್ತ್ರತ ಯೋಜನಾ ವರದಿಗೆ ಏಜೆನ್ಸಿ ನೇಮಕ ಮಾಡಿದ್ದು ಸ್ವಾಗತರ್ಹಾ ಎಂದು ಪತ್ರಿಕಾ ಗೋಷ್ಠಿಯಲ್ಲಿ ಗೋವಿಂದರಾಜ್ ಹೆಗ್ಡೆ ತಿಳಿಸಿದರು.
ಆಶ್ರಯ ಹೋಟೆಲ್ ಮಾಲಕ ರಾಜಾರಾಮ ಶೆಟ್ಟಿ ಮಾತನಾಡಿ ಬ್ರಹ್ಮಾವರದಲ್ಲಿ ಈಗ ನಡೆಯುತ್ತಿರುವ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ವೇಗವಾಗಿ ಮಾಡದೇ ಇದ್ದಲ್ಲಿ ಇಲ್ಲಿನ ವ್ಯವಹಾರಿಕ ಸೆಂಟರ್‌ಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು ಬೇಗನೆ ಕೆಲಸ ಮುಗಿಸಲು ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ದೇವಕಿ ಪೂಜಾರ್ತಿ, ನಿರಂಜನ ಶೆಟ್ಟಿ, ಹಾರಾಡಿ ದಯಾನಂದ ಶೆಟ್ಟಿ, ಬಸ್ ಮಾಲಕರ ಸಂಘದ ವಸಂತ ಶೆಟ್ಟಿ, ಕಾರು ಚಾಲಕ ಮಾಲಕರ ಸಂಘದ ರಮೇಶ್, ರಿಕ್ಷಾ ಚಾಲಕ ಮಾಲಕರ ಸಂಘದ ರಾಜು ಪೂಜಾರಿ, ರಾಜು ಸಾಲ್ಯಾನ್, ಟೆಂಪೋ ಮಾಲಕರ ಸಂಘದಿಂದ ವಿಜಯ ಕುಮಾರ್, ಸಂತೋಷ ಪೂಜಾರಿ, ಗಣೇಶ್ ಶ್ರೀಯಾನ್, ಬ್ರಹ್ಮಾವರ ಅಭಿವೃದ್ಧಿ ಸಮಿತಿಯ ಪ್ರತೀತ್ ಹೆಗ್ಡೆ, ಜೋಯ್ಸನ್, ಕಟ್ಟಡ ಕಾರ್ಮಿಕರ ಸಂಘದ ಸುಭಾಸ್, ಸಿಐಟಿಯು ಸಂಘಟನೆಯ ಶಶಿಧರ ಗೊಲ್ಲ, ಎಸ್.ಎಮ್.ಎಸ್. ವಿದ್ಯಾಸಂಸ್ಥೆಯ ಅಲ್ವಾರಿಸ್ ಡಿಸಿಲ್ವಾ, ಗಿಲ್ಬರ್ಟ್ ಡಿಸಿಲ್ವಾ, ಅಲ್ಬರ್ಟ್ ಡಿಸಿಲ್ವಾ,ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗದ ಶೇಖರ ದೇವಾಡಿಗ ಇದ್ದರು.











