ವಿಶೇಷ ಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಕಲ್ಪಿಸಿ : ಶಾಸಕ ಯಶ್‌ಪಾಲ್ ಎ ಸುವರ್ಣ ಕರೆ

0
94

Click Here

Click Here

ಕುಂದಾಪುರ ಮಿರರ್ ಸುದ್ದಿ …

ಉಡುಪಿ :ವಿಶೇಷ ಚೇತನರು ಸಮಾಜದ ಮುಖ್ಯವಾಹಿನಿಯಲ್ಲಿ ಇತರರೊಂದಿಗೆ ಸರಿ ಸಮಾನವಾಗಿ ಬೆರೆತು ಜೀವನದಲ್ಲಿ ಮುಂದೆ ಬರಲು ಅನುಕೂಲವಾಗುವಂತೆ ಸಮಾಜದಲ್ಲಿ ಪ್ರತಿಯೊಬ್ಬರೂ ಎಲ್ಲಾ ಕ್ಷೇತ್ರದಲ್ಲಿಯೂ ಅವರಿಗೆ ಪ್ರೋತ್ಸಾಹಿಸಿ, ಅವಕಾಶ ಮಾಡಿಕೊಡಬೇಕೆಂದು ಶಾಸಕ ಯಶ್‌ಪಾಲ್ ಎ ಸುವರ್ಣ ಕರೆ ನೀಡಿದರು.

ಅವರು ಇಂದು ನಗರದ ಶ್ರೀ ಆರೂರು ಲಕ್ಷ್ಮೀನಾರಾಯಣ ರಾವ್ ಸ್ಮಾರಕ ಸಭಾಂಗಣದಲ್ಲಿ (ಪುರಭವನ) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ವಿಕಲಚೇತನರ ಸಂಘಟನೆಗಳು ಮತ್ತು ಪಾಲಕರ ಸಂಘಟನೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಶೇಷ ಚೇತನರ ದಿನ ನಿತ್ಯದ ಬದುಕು ಸುಗಮವಾಗಲಿ ಎನ್ನುವ ಕಾರಣದಿಂದ ಸರಕಾರ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಗಾಲಿ ಕುರ್ಚಿಗಳು, ಶ್ರವಣ ಸಾಧನಗಳು, ಯಂತ್ರ ಚಾಲಿತ ದ್ವಿಚಕ್ರ ವಾಹನಗಳು ಮತ್ತು ಇನ್ನಿತರ ಪರಿಕರಗಳನ್ನು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 20 ವಿವಿಧ ವಿಕಲಚೇತನ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ವಿಶೇಷ ಸಾಮರ್ಥ್ಯದ ಜನರೂ ನಮ್ಮಂತೆ ಬದುಕಬೇಕು ಎನ್ನುವ ಉದ್ದೇಶದಿಂದ ಶಾಲೆಗಳನ್ನು ನಡೆಸಲಾಗುತ್ತಿದೆ. ಇಂತಹ ಶಾಲೆಗಳಲ್ಲಿ ಕಲಿಸುವ ಶಿಕ್ಷಕರು ಅಭಿನಂದನೆಗೆ ಅರ್ಹರು ಎಂದರು. ಹೃದಯವಂತಿಕೆಯ ದಾನಿಗಳ ಸಹಕಾರದಿಂದ ವಿಶೇಷ ಚೇತನರ ಬದುಕು ಸುಧಾರಿಸಲು ಸಾಧ್ಯ. ಸರಕಾರದ ಬೆಂಬಲ ಸದಾ ವಿಶೇಷ ಚೇತನರ ಹಿಂದಿರಲಿದೆ ಎಂದ ಅವರು, ವಿಶ್ವ ವಿಕಲಚೇತನರ ದಿನಾಚರಣೆಯ ಜೊತೆಗೆ ಇತರೆ ಕಾರ್ಯಕ್ರಮಗಳನ್ನು ವಿಶೇಷ ಚೇತನರಿಗೆ ಆಯೋಜಿಸುವುದರಿಂದ ಅವರುಗಳಿಗೆ ಚೈತನ್ಯ ದೊರೆಯುವ ಜೊತೆಗೆ ಅವರಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣವಾಗುತ್ತದೆ ಎಂದರು.

Click Here

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ವಿಶೇಷ ಚೇತನರ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯಲ್ಲಿ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಸುಗಮ್ಯ ಭಾರತ ಅಭಿಯಾನದಡಿ ಸಾರ್ವಜನಿಕ ಸಾರಿಗೆ, ಕಟ್ಟಡಗಳು ಮತ್ತು ಕಛೇರಿಗಳನ್ನು ವಿಶೇಷ ಚೇತನರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗುತ್ತಿದೆ. ವಿಶೇಷ ಚೇತನರನ್ನು ಒಳಗೊಂಡಿರುವ ಸಮಾಜವನ್ನು ನಿರ್ಮಿಸುವುದು ಸರಕಾರದ ಗುರಿ. ಸಮಾಜ ಕೂಡಾ ವಿಶೇಷ ಚೇತನರ ಬಗ್ಗೆ ಸಂವೇದನೆ ಹೊಂದಿರಬೇಕು. ಅವರ ಬೇಕು-ಬೇಡ ಮತ್ತು ಕಷ್ಟಗಳಿಗೆ ಸ್ಪಂದಿಸಬೇಕು. ಆಕಸ್ಮಿಕ ಅಪಘಾತಗಳಲ್ಲಿ ಅಂಗ ವೈಕಲ್ಯ ಹೊಂದಿ ಮಾನಸಿಕವಾಗಿ ಆಘಾತ ಗೊಂಡು ಕುಗ್ಗಿದವರಿಗೆ ಆಪ್ತ ಸಮಾಲೋಚನೆಯ ಅಗತ್ಯವಿದ್ದು ಚೇತರಿಕೆಗೆ ಅವರ ಕುಟುಂಬದವರ ಜೊತೆ ಸಮಾಜವೂ ಸಹಕರಿಸಬೇಕು. ವಿಶೇಷ ಚೇತನರ ಜೊತೆ ಬಾಳ್ವೆ ಒಂದು ನಿರಂತರ ಕಲಿಕೆಯಾಗಿದ್ದು, ನಾವೆಲ್ಲರೂ ಇದರಲ್ಲಿ ಸಹಭಾಗಿಗಳಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತನರನ್ನು ಒಳಗೊಂಡ ಸಮಾಜಗಳನ್ನು ರೂಪಿಸುವುದು ಎನ್ನುವ ಘೋಷ ವಾಕ್ಯದೊಂದಿಗೆ ವಿಶ್ವ ವಿಕಲಚೇತನರ ದಿನವನ್ನು ಆಚರಿಸಲಾಗುತ್ತಿದೆ. ಅಂಗವಿಕಲ ವ್ಯಕ್ತಿಗಳು ಇತರ ನಾಗರಿಕರಂತೆಯೇ ಸಮಾಜದ ಅಭಿನ್ನ ಅಂಗವಾಗಿ ಬದುಕಿ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಭಾಗವಹಿಸಿ ಸಮಾನ ಪಾಲನ್ನು ಹೊಂದುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ವಿಕಲಚೇತನರಿಗಾಗಿ ಸ್ವಯಂ ಉದ್ಯೋಗ ಒದಗಿಸುವ “ಆಧಾರ” ಯೋಜನೆಯಡಿ ಶೇ.50 ಸಾಲ ಮತ್ತು ಸಹಾಯಧನ ನೀಡಿಕೆ, ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆ ಮತ್ತು ಇತರ ಸವಲತ್ತುಗಳನ್ನು ಒದಗಿಸಲಾಗುತ್ತಿದ್ದು, ವಿಕಲಚೇತನರ ಪುನರ್ವಸತಿ ಕೇಂದ್ರದ ವತಿಯಿಂದ ವಿವಿಧ ತಾಲೂಕುಗಳಲ್ಲಿ ನಿಯಮಿತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಕಲಚೇತನರಿಗೆ ಅಗತ್ಯವಿರುವ ಸಾಧನ, ಸಲಕರಣೆಗಳು ಮತ್ತು ಸರ್ಕಾರಿ ಸವಲತ್ತುಗಳನ್ನು ವ್ಯವಸ್ಥಿತವಾಗಿ ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 8 ವಿಶೇಷ ಚೇತನ ಪ್ರತಿಭೆಗಳಾದ ಪ್ರೀತಿ, ಪ್ರಥಮ್ ಜೋಶಿ, ಚಿರಾಗ್ ಪೈ, ಸಾಯಿದೀಪ್ ಶೆಟ್ಟಿ, ನಿರಂಜನ್ ಭಟ್ ಮುನ್ನೂರು, ಮಕ್ಬುಲ್ ಶೇಕ್, ಜಿ.ಸುರೇರ್ಶ ಆಚಾರ್ ಹಾಗೂ ಉಮೇಶ್ ಕುಂದರ್ ಅವರುಗಳನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಕಲಚೇತನರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ವಿಶೇಷ ಶಾಲಾ ಮಕ್ಕಳು ಹಾಗೂ ವಿಕಲಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಕುಂದಾಪುರ ಡಿವೈಎಸ್ಪಿ ಹೆಚ್.ಡಿ ಕುಲಕರ್ಣಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್, ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ ಮತ್ತಿತರರು ಉಪಸ್ಥಿತರಿದ್ದರು.

ರೆಡ್‌ಕ್ರಾಸ್ ಕಾರ್ಯದರ್ಶಿ ಗಣನಾಥ ಶೆಟ್ಟಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here